ಗುವಾಹಟಿ(ಅಸ್ಸೋಂ):ಸಿಕ್ಕ ಅವಕಾಶಗಳನ್ನು ಬಳಸಿಕೊಳ್ಳುವಲ್ಲಿ ಎಡವುತ್ತಿರುವ ಯುವ ಕ್ರಿಕೆಟಿಗ ಪೃಥ್ವಿ ಶಾ ರಣಜಿ ಟ್ರೋಫಿಯಲ್ಲಿ ಅಸ್ಸೋಂ ವಿರುದ್ಧದ ಪಂದ್ಯದಲ್ಲಿ ಸಿಡಿಲಬ್ಬರದ ಬ್ಯಾಟ್ ಬೀಸಿದರು. ಮೊದಲ ದಿನದಂದೇ ದ್ವಿಶತಕ ಸಾಧನೆ ಮಾಡಿರುವ ಶಾ, ವೈಯಕ್ತಿಕ ರನ್ ಗಳಿಕೆಯಲ್ಲಿ ತಮ್ಮದೇ ದಾಖಲೆಯನ್ನು ಉತ್ತಮಪಡಿಸಿಕೊಂಡರು. ಗುವಾಹಟಿಯಲ್ಲಿ ಅಸ್ಸೋಂ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಮುಂಬೈ ತಂಡದ ಪೃಥ್ವಿ ಶಾ ಅವರು ಮೊದಲ ದಿನದಂದೇ ಅಬ್ಬರಿಸಿದರು. 283 ಎಸೆತಗಳಲ್ಲಿ ಔಟಾಗದೇ 240 ರನ್ ಗಳಿಸಿದ್ದು, ಎರಡನೇ ದಿನದಾಟಕ್ಕೆ ವಿಕೆಟ್ ಕಾಯ್ದುಕೊಂಡಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್ ವೃತ್ತಿಜೀವನದ ಹಿಂದಿನ ಅಜೇಯ 227 ರನ್ಗಳನ್ನು ಶಾ ಮೀರಿದರು.
33 ಬೌಂಡರಿ ಮತ್ತು 1 ಸಿಕ್ಸರ್ ಸಿಡಿಸಿದ ಮುಂಬೈ ಆರಂಭಿಕ ಆಟಗಾರನ ಆರ್ಭಟಕ್ಕೆ ಅಸ್ಸೋಂ ತಂಡ ಸುಸ್ತಾಯಿತು. ಶಾ ಜೊತೆ ಕಣಕ್ಕಿಳಿದ ಮುಶೀರ್ ಖಾನ್ ಅವರೊಂದಿಗೆ ಮೊದಲ ವಿಕೆಟ್ಗೆ 123 ರನ್ ಕಲೆ ಹಾಕಿದರು. ಮುಶೀರ್ ಖಾನ್ 42 ಗಳಿಸಿದ್ದಾಗ ವಿಕೆಟ್ ಒಪ್ಪಿಸಿದರು. ಬಳಿಕ ಬಂದ ಅರ್ಮಾನ್ ಜಫ್ಫರ್ 27 ರನ್ಗೆ ಔಟಾದರು. ಭಾರತ ಅಂತಾರಾಷ್ಟ್ರೀಯ ಟೆಸ್ಟ್ ತಂಡದಿಂದ ಹೊರಬಿದ್ದಿರುವ ಹಿರಿಯ ಆಟಗಾರ ಅಜಿಂಕ್ಯ ರಹಾನೆ ಜೊತೆ ಸೇರಿದ ಪೃಥ್ವಿ ಶಾ ಮುರಿಯದ 200 ರನ್ ಜೊತೆಯಾಟ ಕಟ್ಟಿದ್ದಾರೆ. ಮೊದಲ ದಿನದಾಂತ್ಯದ ವೇಳೆಗೆ ಮುಂಬೈ ತಂಡ 2 ವಿಕೆಟ್ಗೆ 397 ರನ್ ಗಳಿಸಿದೆ.
ಪೃಥ್ವಿ ಶಾ ಬ್ಯಾಟಿಂಗ್ ಅಬ್ಬರಕ್ಕೆ ಹೆಚ್ಚು ದಂಡಿಸಿಕೊಂಡವರು ಎಡಗೈ ಸ್ಪಿನ್ನರ್ ರೋಷನ್ ಆಲಂ. ಮೊದಲ ದಿನವೇ ಅವರು 76 ರನ್ಗಳನ್ನು ಚಚ್ಚಿದರು. 24 ಓವರ್ ಎಸೆದ ಆಲಂ 112 ರನ್ ಬಿಟ್ಟುಕೊಟ್ಟು ದುಬಾರಿಯಾದರು. ಈ ರಣಜಿ ಟ್ರೋಫಿಯಲ್ಲಿ ಪೃಥ್ವಿ ಶಾ ಗಳಿಸಿದ ಮೊದಲ ಶತಕ ಇದಾಗಿದೆ. ಕಳೆದ ಪಂದ್ಯಗಳ 7 ಇನ್ನಿಂಗ್ಸ್ಗಳಲ್ಲಿ ಕೇವಲ 160 ರನ್ಗಳನ್ನು ಮಾತ್ರ ಗಳಿಸಿದ್ದರು. 68 ಗರಿಷ್ಠ ಸ್ಕೋರ್ ಆಗಿತ್ತು.