ಬೆಂಗಳೂರು:ಸೌರಾಷ್ಟ್ರ ವಿರುದ್ಧದರಣಜಿ ಟ್ರೋಫಿ 2ನೇ ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡದ ನಾಯಕ ಮಯಾಂಕ್ ಅಗರ್ವಾಲ್ ದ್ವಿಶತಕ ಸಾಧನೆ ಮಾಡಿದ್ದಾರೆ. ಏಕಾಂಗಿ ಹೋರಾಟ ನಡೆಸಿದ ಅವರು 249 ರನ್ ಬಾರಿಸಿ ಕುಸಿಯುತ್ತಿದ್ದ ತಂಡಕ್ಕೆ ಆಸರೆಯಾದರು. ಕರ್ನಾಟಕ ಮೊದಲ ಇನಿಂಗ್ಸ್ನಲ್ಲಿ 133.3 ಓವರ್ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 407 ರನ್ ಗಳಿಸಿತು.
ಮೊದಲ ದಿನದಾಟದಲ್ಲಿ 110 ರನ್ ಕಲೆ ಹಾಕಿದ್ದ ಮಯಾಂಕ್ ಎರಡನೇ ದಿನದಾಟದಲ್ಲೂ ಸೌರಾಷ್ಟ್ರ ಬೌಲರ್ಗಳನ್ನು ದಂಡಿಸಿದರು. ವಿಕೆಟ್ ಕೀಪರ್ ಶರತ್ ಶ್ರೀನಿವಾಸ್ ನಾಯಕನಿಗೆ ಸಾಥ್ ನೀಡಿದರು. ಇಬ್ಬರೂ ಸೇರಿ 139 ರನ್ಗಳ ಜೊತೆಯಾಟ ಕಟ್ಟಿದರು. ಅರ್ಧಶತಕ ಗಳಿಸಿ ಆಡುತ್ತಿದ್ದ ಶರತ್(66) ಸಕಾರಿಯಾ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು. ಬಳಿಕ ತಂಡ ಮತ್ತೆ ಕುಸಿತ ಕಂಡಿತು.
ಒಂದೆಡೆ ತಂಡದ ಆಟಗಾರರು ಸತತವಾಗಿ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದರೆ ನೆಲಕಚ್ಚಿ ಆಡಿದ ಮಯಾಂಕ್ 249 ರನ್ ಸಿಡಿಸಿದರು. ಇದಕ್ಕವರು ತೆಗೆದುಕೊಂಡ ಎಸೆತಗಳ ಸಂಖ್ಯೆ 429. ಅಬ್ಬರದ ಬ್ಯಾಟ್ ಬೀಸದೇ ಒಂದೊಂದೇ ರನ್ ಕಲೆ ಹಾಕಿದ ಮಯಾಂಕ್ ನಾಯಕನ ಆಟವಾಡಿದರು. ಇವರ ಇನಿಂಗ್ಸ್ನಲ್ಲಿ 28 ಬೌಂಡರಿ ಮತ್ತು 6 ಸಿಕ್ಸರ್ಗಳಿದ್ದವು.
ಆರಂಭಿಕ ಆಟಗಾರ ಸಮರ್ಥ್ 3, ದೇವದತ್ತ್ ಪಡಿಕ್ಕಲ್ 9, ನಿಕಿನ್ ಜೋಶ್ 18, ಮನೀಶ್ ಪಾಂಡೆ 7, ಶ್ರೇಯಸ್ ಗೋಪಾಲ್ 15, ಕೆ.ಗೌತಮ್ 2, ವಿಜಯ್ಕುಮಾರ್ ವ್ಯಾಸಕ್ 6, ವಿದ್ವತ್ ಕಾವೇರಪ್ಪ 15 ರನ್ ಗಳಿಸಿ ವೈಫಲ್ಯ ಅನುಭವಿಸಿದರು. ಕೊನೆಯಲ್ಲಿ ವಿ.ಕೌಶಿಕ್ ಔಟಾಗದೇ ಉಳಿದರು.
ಮಯಾಂಕ್ಗೆ ಶರತ್ ಸಾಥ್:ಮಯಾಂಕ್ ಅಗರ್ವಾಲ್ ನಿಧಾನವಾಗಿ ರನ್ ಪೇರಿಸುತ್ತಿದ್ದರೆ ವಿಕೆಟ್ ಕೀಪರ್ ಶರತ್ ಶ್ರೀನಿವಾಸ್ ಮತ್ತೊಂದು ತುದಿಯಲ್ಲಿ ಇನಿಂಗ್ಸ್ ಕಟ್ಟಿದರು. ತಂಡ ಸತತವಾಗಿ ವಿಕೆಟ್ ಕಳೆದುಕೊಳ್ಳುತ್ತಿದ್ದುದನ್ನು ಅವರು ತಪ್ಪಿಸಿದರು. 153 ಎಸೆತಗಳಲ್ಲಿ 66 ರನ್ ಗಳಿಸಿದ ಶರತ್ 4 ಬೌಂಡರಿ ಗಳಿಸಿದರು. ತಾಳ್ಮೆಯ ಆಟವಾಡಿದ ಇಬ್ಬರೂ ಆಟಗಾರರು ಶತಕದ ಜೊತೆಯಾಟವಾಡಿದರು. ಶರತ್ ಔಟಾದ ಬಳಿಕ ಉಳಿದ ಬ್ಯಾಟರ್ಗಳಿಂದ ಉತ್ತಮ ಬ್ಯಾಟಿಂಗ್ ಮೂಡದ ಕಾರಣ ಮಯಾಂಕ್ ಅಗರ್ವಾಲ್ ಮತ್ತೆ ಒತ್ತಡಕ್ಕೆ ಸಿಲುಕಿದರು.
ಕೊನೆಯಲ್ಲಿ ತಾವೇ ಭರ್ಜರಿ ಬ್ಯಾಟ್ ಬೀಸಿದರು. ರನ್ ಗಳಿಸುವ ಆತುರದಲ್ಲಿ ರನೌಟ್ಗೆ ಬಲಿಯಾದರು. ಈ ಮೂಲಕ ಕರ್ನಾಟಕದ ಇನಿಂಗ್ಸ್ 407 ರನ್ಗೆ ತೆರೆಬಿತ್ತು. 407 ರನ್ಗಳ ಗುರಿ ಬೆನ್ನಟ್ಟಿರುವ ಸೌರಾಷ್ಟ್ರ ತಂಡ ಮೊದಲ ಇನಿಂಗ್ಸ್ ಆರಂಭಿಸಿದೆ. ಸೌರಾಷ್ಟ್ರ ಪರವಾಗಿ ಚೇತನ್ ಸಕಾರಿಯಾ, ಕೆ.ಪಟೇಲ್ ತಲಾ 3, ಚಿರಾಗ್ ಜಾನಿ, ಪ್ರೇರಕ್ ಮಂಕಡ್ ತಲಾ 1 ವಿಕೆಟ್ ಪಡೆದರು.
ಇದನ್ನೂ ಓದಿ:ಬಾರ್ಡರ್ - ಗವಾಸ್ಕರ್ ಟ್ರೋಫಿ: ಆಸ್ಟ್ರೇಲಿಯಾ ತಂಡಕ್ಕೆ ಆರಂಭದಲ್ಲೇ ಶಾಕ್ ನೀಡಿದ ಟೀಂ ಇಂಡಿಯಾ