ಲಂಡನ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯ ಡ್ರಾ ಆಗುವಂತೆ ಮಾಡಿದ್ದ ಮಳೆ ಇಂದಿನಿಂದ ಆರಂಭವಾಗಿರುವ 2ನೇ ಟೆಸ್ಟ್ಗೂ ಅಡಚಣೆಯನ್ನುಂಟು ಮಾಡಿದೆ.
ಕ್ರಿಕೆಟ್ ಕಾಶಿ ಎಂದೇ ಖ್ಯಾತಿ ಪಡೆದಿರುವ ಲಾರ್ಡ್ಸ್ ಕ್ರೀಡಾಂಗಣದಲ್ಲಿ ಇಂದಿನಿಂದ 2ನೇ ಟೆಸ್ಟ್ ಪಂದ್ಯ ಆರಂಭವಾಗಿದ್ದು, ಟಾಸ್ ಗೆದ್ದ ಇಂಗ್ಲೆಂಡ್ ಭಾರತಕ್ಕೆ ಬ್ಯಾಟಿಂಗ್ ಆಹ್ವಾನ ನೀಡಿದೆ. ಆದರೆ, ಕೇವಲ 18.4 ಓವರ್ಗಳ ಆಟ ಮಾತ್ರ ನಡೆದಿದ್ದು, ನಿರೀಕ್ಷೆಯಂತೆ ಮಳೆ ಆರಂಭವಾದ ಕಾರಣ ನಿಗದಿತ ಸಮಯಕ್ಕೂ ಮೊದಲೇ ಭೋಜನ ವಿರಾಮ ತೆಗೆದುಕೊಳ್ಳಲಾಗಿದೆ.
ಭಾರತ ತಂಡ 18.4 ಓವರ್ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ 46 ರನ್ಗಳಿಸಿದೆ. ರೋಹಿತ್ ಶರ್ಮಾ 66 ಎಸೆತಗಳಲ್ಲಿ 6 ಬೌಂಡರಿ ಸಹಿತ 35 ರನ್ಗಳಿಸಿದ್ದರೆ, ಕನ್ನಡಿಗ ಕೆಎಲ್ ರಾಹುಲ್ ಅಜೇಯ 10 ರನ್ಗಳಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ.
ಮೊದಲ ಪಂದ್ಯದಲ್ಲಿ ವೈಫಲ್ಯ ಅನುಭವಿಸಿದ್ದ ಜ್ಯಾಕ್ ಕ್ರಾಲಿ ಬದಲಿಗೆ ಹಸೀಮ್ ಹಮೀದ್ , ಲಾರೆನ್ಸ್ ಬದಲಿಗೆ ಮೊಯೀನ್ ಅಲಿ ಮತ್ತು ಗಾಯಾಳು ಸ್ಟುವರ್ಟ್ ಬದಲಿಗೆ ಮಾರ್ಕ್ವುಡ್ ಇಂಗ್ಲೆಂಡ್ ತಂಡದಲ್ಲಿ ಅವಕಾಶ ಪಡೆದಿದ್ದಾರೆ.