ನವದೆಹಲಿ: ಟಿ-20 ವಿಶ್ವಕಪ್ ನಂತರ ಭಾರತ ಕ್ರಿಕೆಟ್ ತಂಡದ ತರಬೇತುದಾರ ರವಿಶಾಸ್ತ್ರಿ ಅವಧಿ ಮುಕ್ತಾಯಗೊಳ್ಳುತ್ತಿದ್ದು, ಈ ಹಿನ್ನೆಲೆ ಆ ಜಾಗಕ್ಕೆ ಹಲವರ ಹೆಸರು ಕೇಳಿ ಬರುತ್ತಿದೆ. ಇದೀಗ ಟೀಂ ಇಂಡಿಯಾ ತಂಡದ ಮುಖ್ಯ ಆಯ್ಕೆಗಾರರಾಗಿದ್ದ ಎಂಎಸ್ಕೆ ಪ್ರಸಾದ್ ಭಾರತ ತಂಡಕ್ಕೆ ರಾಹುಲ್ ದ್ರಾವಿಡ್ ಕೋಚ್ ಆಗಲಿ ಎಂದು ಸಲಹೆ ನೀಡಿದ್ದಾರೆ.
ಐಪಿಎಲ್ ಪಂದ್ಯಾವಳಿಯ ವೀಕ್ಷಕ ವಿವರಣೆ ನೀಡುತ್ತಿದ್ದ ವೇಳೆ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಭಾರತ ತಂಡದ ಕೋಚ್ ಹುದ್ದೆಗೆ ದ್ರಾವಿಡ್ ಸೂಕ್ತ ವ್ಯಕ್ತಿ ಎನಿಸುತ್ತಾರೆ. ರವಿ ಭಾಯ್ ಬಳಿಕ ಆ ಜಾಗದಲ್ಲಿ ರಾಹುಲ್ ಹಾಗೂ ಮೆಂಟರ್ ಆಗಿ ಮಹೇಂದ್ರ ಸಿಂಗ್ ಧೋನಿ ಅವರನ್ನು ನೋಡಲು ಬಯಸಿದ್ದೇನೆ. ರಾಹುಲ್ ದ್ರಾವಿಡ್ಗೆ ಆಟದ ವಿಚಾರದಲ್ಲಿ ಅನುಭವವಿದೆ. ಭಾರತ ತಂಡಕ್ಕೆ ಹೆಚ್ಚಿನ ಮೌಲ್ಯ ತಂದುಕೊಡಲಿದ್ದಾರೆ ಎಂದೆನಿಸುತ್ತಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.