ದುಬೈ:ಭಾರತದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ಇತ್ತೀಚಿನ ಎಂಆರ್‌ಎಫ್ ಟೈರ್ಸ್ ಐಸಿಸಿ ಪುರುಷರ ಟೆಸ್ಟ್ ಬೌಲಿಂಗ್ ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೆ ತಲುಪಿದ್ದಾರೆ. ಎರಡನೇ ಸ್ಥಾನದಲ್ಲಿದ್ದ ಅಶ್ವಿನ್ ಅಗ್ರ ಪಟ್ಟದಲ್ಲಿದ್ದ ಜೇಮ್ಸ್ ಆಂಡರ್ಸನ್ ಕೆಳಗಿಳಿಸಿ ನಂ.1 ಆಗಿ ಹೊರ ಹೊಮ್ಮಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ 6 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಅಶ್ವಿನ್ ಅವರ ಆಟಕ್ಕೆ ಈ ಪಟ್ಟ ಮತ್ತೆ ಒಲಿದಿದೆ.
ಐಸಿಸಿ ಟೆಸ್ಟ್ ರ‍್ಯಾಂಕಿಂಗ್ ಪಟ್ಟಿ 2015ರಲ್ಲಿ 36 ವರ್ಷದ ಆರ್ ಅಶ್ವಿನ್ ಟೆಸ್ಟ್‌ನಲ್ಲಿ ನಂಬರ್ 1 ಬೌಲರ್ ಆಗಿದ್ದರು. ಇದಾದ ನಂತರವೂ ಹಲವು ಬಾರಿ ಈ ಪಟ್ಟ ಅಲಂಕರಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಬಾರ್ಡರ್ - ಗವಾಸ್ಕರ್ ಟ್ರೋಫಿ ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ಆರ್ ಅಶ್ವಿನ್ ಅದ್ಭುತ ಪ್ರದರ್ಶನ ನೀಡಿದ್ದಾರೆ. ಅಶ್ವಿನ್ 864 ರೇಟಿಂಗ್‌ಗಳೊಂದಿಗೆ ಟೆಸ್ಟ್‌ನಲ್ಲಿ ನಂಬರ್ 1 ಸ್ಥಾನಕ್ಕೆ ತಲುಪಿದ್ದಾರೆ.
ಜೇಮ್ಸ್ ಆಂಡರ್ಸನ್ 859 ರೇಟಿಂಗ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಆಸಿಸ್ನ ನಾಯಕ ಪ್ಯಾಟ್ ಕಮಿನ್ಸ್ 858 ಅಂಕಗಳಿಂದ ಮೂರನೇ ಸ್ಥಾನದಲ್ಲಿದ್ದಾರೆ. ಬಹಳ ತಿಂಗಳಿಂದ ಗಾಯದ ಸಮಸ್ಯೆ ಕಾರಣ ತಂಡದಿಂದ ಹೊರಗುಳಿದಿರುವ ಬೂಮ್ರಾ 4ನೇ ಶ್ರೇಯಾಂಕದಲ್ಲಿದ್ದಾರೆ. ಇದಲ್ಲದೇ ಆಲ್ ರೌಂಡರ್‌ಗಳ ಪಟ್ಟಿಯಲ್ಲಿ ಆರ್ ಅಶ್ವಿನ್ ಎರಡನೇ ಸ್ಥಾನದಲ್ಲಿ ಮುಂದುವರೆದಿದ್ದಾರೆ.
ರವೀಂದ್ರ ಜಡೇಜಾ ಆಲ್ ರೌಂಡರ್‌ಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಮುಂದುವರೆದಿದ್ದಾರೆ. ಬೌಲಿಂಗ್ ವಿಭಾಗದಲ್ಲಿ 8ನೇ ಸ್ಥಾನದಲ್ಲಿದ್ದಾರೆ. ದೆಹಲಿಯ ಪಂದ್ಯದಲ್ಲಿ ಜಡ್ಡು 10 ವಿಕೆಟ್ ಪಡೆದು ಮಿಂಚಿದ್ದರು. ಬಾರ್ಡರ್ ಗವಾಸ್ಕರ್ ಟ್ರೋಫಿಯ ಮೊದಲ ಮತ್ತು ಎರಡನೇ ಪಂದ್ಯದಲ್ಲಿ ಭರ್ಜರಿ ಬ್ಯಾಟ್ ಬೀಸಿದ ಅಕ್ಷರ್ ಪಟೇಲ್ 283 ಅಂಕಗಳಿಂದ ಆಲ್ರೌಂಡರ್ ಪಟ್ಟಿಯಲ್ಲಿ 5ನೇ ಶ್ರೇಯಾಂಕದಲ್ಲಿದ್ದಾರೆ. ಶಕಿಬ್ ಅಲ್ ಹಸನ್ ಮತ್ತು ಬೆನ್ ಸ್ಟೋಕ್ಸ್ ಕ್ರಮವಾಗಿ 3 ಮತ್ತು 4 ನೇ ಸ್ಥಾನದಲ್ಲಿದ್ದಾರೆ.
ಆರ್. ಅಶ್ವಿನ್ ಭಾರತ ತಂಡದ ಪರ ಇದುವರೆಗೆ 90 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 170 ಇನ್ನಿಂಗ್ಸ್‌ಗಳಲ್ಲಿ 463 ವಿಕೆಟ್‌ಗಳನ್ನು ಪಡೆದಿದ್ದಾರೆ. ಈ ವೇಳೆ, ಅವರು 23,693 ಎಸೆತಗಳನ್ನು ಎಸೆದಿದ್ದಾರೆ. ಇದಲ್ಲದೇ, ಅಶ್ವಿನ್ 113 ಏಕದಿನ ಪಂದ್ಯಗಳನ್ನು ಆಡಿದ್ದು, ಇದರಲ್ಲಿ 151 ವಿಕೆಟ್‌ಗಳನ್ನು ಪಡೆದಿದ್ದಾರೆ. 65 ಟಿ20 ಪಂದ್ಯಗಳಲ್ಲಿ 72 ವಿಕೆಟ್ ಪಡೆದಿದ್ದಾರೆ.
ರ‍್ಯಾಂಕಿಂಗ್ ಪಟ್ಟಿಯಲ್ಲಿ ಗೊಂದಲ:ಕೆಲದಿನಗಳ ಹಿಂದೆ ಐಸಿಸಿ ರ‍್ಯಾಂಕಿಂಗ್ ಪಟ್ಟಿ ಗೊಂದಲ ಉಂಟಾಗಿತ್ತು. ದೆಹಲಿಯ ಎರಡನೇ ಟೆಸ್ಟ್ ಪಂದ್ಯ ಮುಗಿದ ಬೆನ್ನಲ್ಲೇ ತಂಡ ರ‍್ಯಾಂಕಿಂಗ್ ಪಟ್ಟಿಯಲ್ಲಿ ಬದಲಾವಣೆ ಕಂಡು ಬಂದಿತ್ತು. ಶ್ರೇಯಾಂಕದಲ್ಲಿ ಅಗ್ರ ಪಟ್ಟದಲ್ಲಿದ್ದ ಆಸ್ಟ್ರೇಲಿಯಾವನ್ನು ಭಾರತ ಕೆಳಕ್ಕೆ ತಳ್ಳಿ ಮೊದಲ ಸ್ಥಾನ ಅಂಕರಿಸಿತ್ತು. ಇದು ತಾಂತ್ರಿಕ ದೋಷದಿಂದ ಈ ರೀತಿ ಆಗಿದೆ ಎಂದು ಐಸಿಸಿ ತಿಳಿಸಿತ್ತು. ಸುಮಾರು 8 ಗಂಟೆಗೂ ಹೆಚ್ಚು ಭಾರತ ಅಗ್ರ ಸ್ಥಾನದಲ್ಲಿತ್ತು ಮಾಧ್ಯಮಗಳಲ್ಲಿ ವರದಿಯಾಗಿರುವುದನ್ನು ಕಂಡು ಐಸಿಸಿ ಸ್ಪಷ್ಟನೆ ನೀಡಿತ್ತು.
ಇದನ್ನೂ ಓದಿ:IND Vs AUS 3rd Test: ಆಸೀಸ್ ಸ್ಪಿನ್ನರ್ಗಳೆದುರು ಎಡವಿಡ ಭಾರತ, 109ಕ್ಕೆ ಸರ್ವ ಪತನ