ಅಹಮದಾಬಾದ್ (ಗುಜರಾತ್): ಭಾರತದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಶುಕ್ರವಾರ ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್ ಗವಾಸ್ಕರ್ ಟ್ರೋಫಿ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡರು. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಭಾರತದ ನಾಲ್ಕನೇ ಮತ್ತು ಅಂತಿಮ ಟೆಸ್ಟ್‌ನಲ್ಲಿ ಅಶ್ವಿನ್ ಈ ಮೈಲಿಗಲ್ಲನ್ನು ಸಾಧಿಸಿದ್ದಾರೆ.
ಮೊದಲ ಇನ್ನಿಂಗ್ಸ್‌ನಲ್ಲಿ, ಸ್ಪಿನ್ನರ್‌ಗಳಿಗೆ ನಿಜವಾಗಿಯೂ ಹೆಚ್ಚಿನ ಸಹಾಯವನ್ನು ನೀಡದ ಪಿಚ್‌ನಲ್ಲಿ ಅಶ್ವಿನ್ ಮತ್ತೊಮ್ಮೆ ತಮ್ಮ ಮ್ಯಾಜಿಕ್ ಮಾಡಿದರು. 47.2 ಓವರ್ ಮಾಡಿದ ಅಶ್ವಿನ್ 91 ರನ್ ಬಿಟ್ಟುಕೊಟ್ಟು 6 ವಿಕೆಟ್ ಗಳಿಸಿದರು. ಮೊದಲ ಇನ್ನಿಂಗ್ಸ್‌ನಲ್ಲಿ ಟ್ರಾವಿಸ್ ಹೆಡ್ (32), ಕ್ಯಾಮೆರಾನ್ ಗ್ರೀನ್ (114), ಅಲೆಕ್ಸ್ ಕ್ಯಾರಿ (0), ಮಿಚೆಲ್ ಸ್ಟಾರ್ಕ್ (6), ನಾಥನ್ ಲಿಯಾನ್ (34) ಮತ್ತು ಟಾಡ್ ಮರ್ಫಿ (41) ಅವರ ಪ್ರಮುಖ ವಿಕೆಟ್‌ಗಳನ್ನು ಪಡೆದಿದ್ದಾರೆ. 22 ಪಂದ್ಯಗಳಲ್ಲಿ ಅಶ್ವಿನ್ 28.10 ರ ಸರಾಸರಿಯಲ್ಲಿ 2.71 ರ ಎಕಾನಮಿ ರೇಟ್‌ನಲ್ಲಿ 113 ವಿಕೆಟ್‌ಗಳನ್ನು ಪಡೆದಿದ್ದಾರೆ. ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ 103ಕ್ಕೆ 7 ವಿಕೆಟ್ ಕಿತ್ತದ್ದು ಅವರ ಅತ್ಯುತ್ತಮ ಸಾಧನೆಯಾಗಿದೆ.
ಆಸಿಸ್ನ ನಾಥನ್ ಲಿಯಾನ್ ಕೂಡಾ 113 ವಿಕೆಟ್ ಪಡೆದಿದ್ದಾರೆ. ಅಶ್ವಿನ್ ಅವರು ಲಿಯಾನ್ ದಾಖಲೆ ಸರಿಗಟ್ಟಿದ್ದಾರೆ. ಆದರೆ, ಲಿಯಾನ್ 113 ವಿಕೆಟ್ ಪಡೆಯಲು 26 ಪಂದ್ಯಗಳನ್ನು ತೆಗೆದುಕೊಂಡಿರುವ ಕಾರಣ ಎರಡನೇ ಸ್ಥಾನದಲ್ಲಿದ್ದಾರೆ. ಲಿಯಾನ್ 31.92 ಸರಾಸರಿಯಲ್ಲಿ 3.09 ಎಕಾನಮಿಯಲ್ಲಿ ಬೌಲಿಂಗ್ ಮಾಡಿದ್ದಾರೆ. ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ 8/50 ಅವರ ಅತ್ಯುತ್ತಮ ಸಾಧನೆಯಾಗಿದೆ. ಅಶ್ವಿನ್ ಮತ್ತು ಲಿಯಾನ್ ನಂತರದ ಸ್ಥಾನದಲ್ಲಿ ಭಾರತದ ಸ್ಪಿನ್ ದಿಗ್ಗಜ ಅನಿಲ್ ಕುಂಬ್ಳೆ (111) ಮತ್ತು ಹರ್ಭಜನ್ ಸಿಂಗ್ (95) ಇದ್ದಾರೆ. ರವೀಂದ್ರ ಜಡೇಜಾ 85 ವಿಕೆಟ್‌ಗಳೊಂದಿಗೆ ಬಾರ್ಡರ್-ಗವಾಸ್ಕರ್ ಟ್ರೋಫಿಯ ಅತೀ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದಾರೆ.