ರಾಜ್‌ಕೋಟ್ (ಗುಜರಾತ್):ರಣಜಿ ಟ್ರೋಫಿಯಲ್ಲಿ ಹಿರಿಯ ಬ್ಯಾಟರ್ ಚೇತೇಶ್ವರ ಪೂಜಾರ ದಾಖಲೆಯ ದ್ವಿಶತಕ ಸಿಡಿಸಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 17ನೇ ಡಬಲ್ ಸೆಂಚುರಿಯ ಸಾಧನೆ ಮಾಡಿದ್ದಾರೆ. ಅಲ್ಲದೇ, ಈ ಸಾಧನೆ ಮಾಡಿದ ಅಂತಾರಾಷ್ಟ್ರೀಯ ಆಟಗಾರರ ಸಾಲಿಗೂ ಸೇರಿದ್ದಾರೆ.
ರಣಜಿ ಟ್ರೋಫಿಯಲ್ಲಿ ಸೌರಾಷ್ಟ್ರ ಪರ ಆಡುತ್ತಿರುವ ಟೆಸ್ಟ್ ಸ್ಪೆಷಲಿಸ್ಟ್ ಪೂಜಾರ, ಜಾರ್ಖಂಡ್ ವಿರುದ್ಧ ಭರ್ಜರಿ ದ್ವಿಶತಕ (ಅಜೇಯ 246 ರನ್) ಬಾರಿಸಿದ್ದಾರೆ. ಈ ಮೂಲಕ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ದ್ವಿಶತಕ ಗಳಿಸಿದ ಭಾರತದ ನಾಲ್ಕನೇ ಆಟಗಾರ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಅಲ್ಲದೇ, ಈ ದ್ವಿಶತಕದೊಂದಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಂಗ್ಲೆಂಡ್‌ನ ಹರ್ಬರ್ಟ್ ಸಟ್‌ಕ್ಲಿಫ್ (17 ದ್ವಿಶತಕ) ಮತ್ತು ಮಾರ್ಕ್ (17 ದ್ವಿಶತಕ) ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.
ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 37 ದ್ವಿಶತಕಗಳ ಬಾರಿಸುವ ಮೂಲಕ ದಿಗ್ಗಜ ಆಟಗಾರ ಸರ್ ಡಾನ್ ಬ್ರಾಡ್ಮನ್ ಅಗ್ರಸ್ಥಾನದಲ್ಲಿದ್ದರೆ, ಇಂಗ್ಲೆಂಡ್‌ನ ಮಾಜಿ ಕ್ರಿಕೆಟಿಗರಾದ ವಾಲಿ ಹ್ಯಾಮಂಡ್ (36) ಮತ್ತು ಪ್ಯಾಟ್ಸಿ ಹೆಂಡ್ರೆನ್ (22) ನಂತರದ ಸ್ಥಾನದಲ್ಲಿದ್ದಾರೆ. ಇದೀಗ 35 ವರ್ಷ ವಯಸ್ಸಿನ ಪೂಜಾರ ಅಂತಾರಾಷ್ಟ್ರೀಯ ಆಟಗಾರರ ಅತಿ ಹೆಚ್ಚು ದ್ವಿಶತಕಗಳ ಗಳಿಸಿದವರ ಪಟ್ಟಿಯಲ್ಲಿ ತಮ್ಮ ಹೆಸರನ್ನು ದಾಖಲಿಸಿದ್ದಾರೆ.
ಅತಿ ಹೆಚ್ಚು ರನ್ ಗಳಿಸಿದ 4ನೇ ಬ್ಯಾಟರ್: ಭಾರತೀಯ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ನಾಲ್ಕನೇ ಆಟಗಾರ ಎಂಬ ಖ್ಯಾತಿಗೆ ಪಾತ್ರರಾಗಿರುವ ಪೂಜಾರ ವಿವಿಎಸ್ ಲಕ್ಷ್ಮಣ್ ಅವರನ್ನು ಹಿಂದಿಕ್ಕಿದ್ದಾರೆ. ದೇಶೀಯ ಕ್ರಿಕೆಟ್‌ನಲ್ಲಿ ಹೈದರಾಬಾದ್ ಪ್ರತಿನಿಧಿಸಿದ್ದ ಮಾಜಿ ಬ್ಯಾಟರ್ ಲಕ್ಷ್ಮಣ್ 19,730 ರನ್‌ಗಳೊಂದಿಗೆ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಆಟಗಾರರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದರು.