ನಾರ್ಥಾಂಪ್ಟನ್ (ಲಂಡನ್):ಇಂಗ್ಲೆಂಡ್‌ನ ದೇಶೀಯ ಕ್ರಿಕೆಟ್ನಲ್ಲಿ ಮುಂಬೈ ಆಟಗಾರ ದಾಖಲೆಯ ಆಟ ಆಡಿದ್ದಾರೆ. ಫಾರ್ಮ್ ಕಂಡುಕೊಳ್ಳಲು ಇಂಗ್ಲೆಂಡ್‌ಗೆ ಪ್ರವಾಸ ಮಾಡಿ ಅಲ್ಲಿನ ದೇಶೀ ಕ್ರಿಕೆಟ್ನಲ್ಲಿ ಆಡುತ್ತಿರುವ ಪೃಥ್ವಿ ಶಾ 244 ರನ್ ಗಳಿಸಿದ್ದಾರೆ. ಇಂಗ್ಲೆಂಡ್‌ನ ಡೊಮೆಸ್ಟಿಕ್ ಕ್ರಿಕೆಟ್ನಲ್ಲಿ ದ್ವಿಶತಕ ಗಳಿಸಿದ ವಿಶ್ವದ 3ನೇ ಕ್ರಿಕೆಟಿಗ ಎಂದ ದಾಖಲೆಯನ್ನೂ ಶಾ ಬರೆದರು. ಅಲ್ಲದೇ ದೇಶೀಯ ಏಕದಿನದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿಯೂ ಹೊರಹೊಮ್ಮಿದ್ದಾರೆ.
ಭಾರತದ ದೇಶೀ ಕ್ರಿಕೆಟ್ನಲ್ಲಿ ಮಿಂಚಿ ಅಂತಾರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿದ್ದ ಶಾ, ಇತ್ತೀಚಿನ ವರ್ಷಗಳಲ್ಲಿ ಉತ್ತಮ ಫಾರ್ಮ್ ತೋರುವಲ್ಲಿ ವಿಫಲರಾಗಿದ್ದರು. ಈ ವರ್ಷದ ಐಪಿಎಲ್ನಲ್ಲೂ ಅತ್ಯಂತ ಕಳೆಪೆ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಇದರಿಂದಾಗಿ ರಾಷ್ಟ್ರೀಯ ತಂಡದ ಆಯ್ಕೆ ಅವರಿಗೆ ಗಗನ ಕುಸುಮವಾಗಿತ್ತು. ಹೀಗಾಗಿ ಹಿರಿಯ ಆಟಗಾರರಾದ ಪೂಜಾರ ಮತ್ತು ರಹಾನೆ ಮಾರ್ಗ ಹಿಡಿದ ಶಾ ಇಂಗ್ಲೆಂಡ್‌ನ ದೇಶೀ ತಂಡ ಸೇರಿಕೊಂಡಿದ್ದಾರೆ. ಲಂಡನ್ನಲ್ಲಿ ನಾರ್ಥಾಂಪ್ಟನ್‌ಶೈರ್ ಪರ ಆರಂಭಿಕರಾಗಿ ಕಣಕ್ಕಿಳಿಯುತ್ತಿದ್ದಾರೆ.
ಇಂದು ಸೋಮರ್‌ಸೆಟ್ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದ ನಾರ್ಥಾಂಪ್ಟನ್‌ಶೈರ್ ಮೊದಲು ಬ್ಯಾಟಿಂಗ್‌ಗೆ ಇಳಿಯಿತು. ಪಂದ್ಯದಲ್ಲಿ ಶಾ ಭರ್ಜರಿ ಬ್ಯಾಟ್ ಬೀಸಿದ್ದಾರೆ. 153 ಎಸೆತಗಳನ್ನು ಎದುರಿಸಿ 28 ಬೌಂಡರಿ ಮತ್ತು 11 ಸಿಕ್ಸ್ ಸಹಾಯದಿಂದ 244 ರನ್ ಗಳಿಸಿದರು. ಶಾ ದ್ವಿಶತಕದ ನೆರವಿನಿಂದ ನಾರ್ಥಾಂಪ್ಟನ್‌ಶೈರ್ ತಂಡ 50 ಓವರ್ಗಳ ಅಂತ್ಯಕ್ಕೆ 8 ವಿಕೆಟ್ ಕಳೆದುಕೊಂಡ 415 ರನ್ ಬೃಹತ್ ಗುರಿ ನೀಡಿತು.