ಸೌಂತಪ್ಟನ್(ಇಂಗ್ಲೆಂಡ್):ಆಂಗ್ಲರ ವಿರುದ್ಧ ಐದನೇ ಟೆಸ್ಟ್ ಪಂದ್ಯ ಸೋತಿರುವ ಬೆನ್ನಲ್ಲೇ ಟೀಂ ಇಂಡಿಯಾ ನಾಳೆಯಿಂದ ಚುಟುಕು ಕ್ರಿಕೆಟ್ನಲ್ಲಿ ಭಾಗಿಯಾಗಲಿದೆ. ಅದಕ್ಕಾಗಿ ರೋಹಿತ್ ಶರ್ಮಾ ತಂಡ ಮುನ್ನಡೆಸಲಿದ್ದು, ಕೆಲವೊಂದು ಹೊಸ ಪ್ರತಿಭೆಗಳು ನಾಳೆಯ ಪಂದ್ಯದಲ್ಲಿ ಅವಕಾಶ ಗಿಟ್ಟಿಸಿಕೊಳ್ಳುವ ಸಾಧ್ಯತೆ ಇದೆ. ಮುಂಬರುವ ಟಿ-20 ವಿಶ್ವಕಪ್ ಗಮನದಲ್ಲಿಟ್ಟುಕೊಂಡು ಭಾರತಕ್ಕೆ ಈ ಸರಣಿ ಮಹತ್ವದಾಗಿದೆ. ಜೊತೆಗೆ ಆಡುವ 11ರ ಬಳಗ ಅಂತಿಮಗೊಳಿಸುವ ಪ್ರಯೋಗ ಸಹ ಆರಂಭಗೊಳ್ಳಲಿದೆ.
ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ, ರವೀಂದ್ರ ಜಡೇಜಾ, ಶ್ರೇಯಸ್ ಅಯ್ಯರ್ ಮತ್ತು ರಿಷಭ್ ಪಂತ್ ಮೊದಲ ಏಕದಿನ ಪಂದ್ಯದಿಂದ ವಿಶ್ರಾಂತಿ ಪಡೆದುಕೊಂಡಿದ್ದು, ಎರಡನೇ ಪಂದ್ಯದ ವೇಳೆಗೆ ತಂಡ ಸೇರಿಕೊಳ್ಳಲಿದ್ದಾರೆ. ಅವರ ಅನುಪಸ್ಥಿತಿಯಲ್ಲಿ ಋತುರಾಜ್ ಗಾಯಕ್ವಾಡ್, ಸಂಜು ಸ್ಯಾಮ್ಸನ್ ಅಥವಾ ಇಶಾನ್ ಕಿಶನ್ ಆರಂಭಿಕರಾಗಿ ಅವಕಾಶ ಪಡೆದುಕೊಳ್ಳಲಿದ್ದಾರೆ.
ಐರ್ಲೆಂಡ್ ವಿರುದ್ಧ ನಡೆದ ಎರಡು ಟಿ-20 ಪಂದ್ಯಗಳಲ್ಲಿ ಗಾಯಕ್ವಾಡ್ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ಆದರೆ, ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್ ಮಿಂಚಿದ್ದು, ನಾಳೆಯ ಪಂದ್ಯದಲ್ಲಿ ರೋಹಿತ್ ಜೊತೆ ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆ ಇದೆ. ಕೊಹ್ಲಿ ಹೊರಗುಳಿದಿರುವ ಕಾರಣ, ಐರ್ಲೆಂಡ್ ಸರಣಿಯಲ್ಲಿ ಮಿಂಚಿರುವ ದೀಪಕ್ ಹೂಡಾ ಆಡುವ 11ರ ಬಳಗದಲ್ಲಿ ಇರಲಿದ್ದು, ಮತ್ತೊಮ್ಮೆ ಮಿಂಚುವ ಇರಾದೆ ಇಟ್ಟುಕೊಂಡಿದ್ದಾರೆ.
ಇದನ್ನೂ ಓದಿರಿ:ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಗೆ ಟೀಂ ಇಂಡಿಯಾ ಪ್ರಕಟ.. ಶಿಖರ್ ಧವನ್ ಕ್ಯಾಪ್ಟನ್
ಬೌಲಿಂಗ್ ವಿಭಾಗದಲ್ಲಿ ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್ ಇರುವ ಕಾರಣ ವೇಗಿ ಉಮ್ರಾನ್ ಮಲಿಕ್ ಕಣಕ್ಕಿಳಿಯುವ ಸಾಧ್ಯತೆ ಕಡಿಮೆಯಾಗಿದೆ. ಆದರೆ, ಆವೇಶ್ ಖಾನ್ ಮೂರನೇ ಬೌಲರ್ ಆಗಿ ಅವಕಾಶ ಪಡೆದುಕೊಳ್ಳುವ ಸಾಧ್ಯತೆ ಇದೆ. ಸ್ಪಿನ್ ವಿಭಾಗದಲ್ಲಿ ರವಿ ಬಿಷ್ಣೋಯ್ ಬದಲಿಗೆ ಯಜುವೇಂದ್ರ ಚಹಲ್ ಅವಕಾಶ ಗಿಟ್ಟಿಸಿಕೊಳ್ಳುವ ನಿರೀಕ್ಷೆ ಇದೆ. ಅಕ್ಟೋಬರ್ ತಿಂಗಳಲ್ಲಿ ಆಸ್ಟ್ರೇಲಿಯಾ ನೆಲದಲ್ಲಿ ಟಿ-20 ವಿಶ್ವಕಪ್ ಟೂರ್ನಿ ನಡೆಯಲಿದೆ. ಅದಕ್ಕೂ ಮೊದಲು ಟೀಂ ಇಂಡಿಯಾ ಸುಮಾರು 15 ಟಿ-20 ಪಂದ್ಯಗಳನ್ನಾಡಲಿದ್ದು, ಬೆಸ್ಟ್ ಪ್ಲೇಯಿಂಗ್ XI ಹುಡುಕಾಟದಲ್ಲಿದೆ.
ಇಂಗ್ಲೆಂಡ್ ತಂಡ:ಜೋಸ್ ಬಟ್ಲರ್ (ನಾಯಕ), ಮೊಯಿನ್ ಅಲಿ, ಹ್ಯಾರಿ ಬ್ರೂಕ್, ಸ್ಯಾಮ್ ಕುರಾನ್, ರಿಚರ್ಡ್ ಗ್ಲೀಸನ್, ಕ್ರಿಸ್ ಜೋರ್ಡಾನ್, ಲಿಯಾಮ್ ಲಿವಿಂಗ್‌ಸ್ಟೋನ್, ಡೇವಿಡ್ ಮಲನ್, ಟೈಮಲ್ ಮಿಲ್ಸ್, ಮ್ಯಾಥ್ಯೂ ಪಾರ್ಕಿನ್ಸನ್, ಜೇಸನ್ ರಾಯ್, ಫಿಲ್ ಸಾಲ್ಟ್, ರೀಸ್ ಟೋಪ್ಲಿ ಮತ್ತು ಡೇವಿಡ್ ವಿಲ್ಲಿ.
ಭಾರತ:ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್, ರುತುರಾಜ್ ಗಾಯಕ್ವಾಡ್, ಸಂಜು ಸ್ಯಾಮ್ಸನ್, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ದಿನೇಶ್ ಕಾರ್ತಿಕ್(ವಿ,ಕೀ), ಹಾರ್ದಿಕ್ ಪಾಂಡ್ಯ, ವೆಂಕಟೇಶ್ ಅಯ್ಯರ್, ಯುಜ್ವೇಂದ್ರ ಚಹಾಲ್, ಅಕ್ಷರ್ ಪಟೇಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್ ಹರ್ಷಲ್ ಪಟೇಲ್, ಅವೇಶ್ ಖಾನ್, ಅರ್ಷದೀಪ್ ಸಿಂಗ್, ಉಮ್ರಾನ್ ಮಲಿಕ್