ಕರ್ನಾಟಕ

karnataka

ETV Bharat / sports

'ನಾವು ಯಾವಾಗಲೂ ನಿಮ್ಮೊಂದಿಗಿರುತ್ತೇವೆ': ವಿಶ್ವಕಪ್‌ ಸೋಲಿನ ಬಳಿಕ ಭಾರತ ಕ್ರಿಕೆಟ್‌ ತಂಡಕ್ಕೆ ಮೋದಿ ಸಂದೇಶ - World Cup 2023

PM Modi's message to Indian cricket team: ಐಸಿಸಿ ವಿಶ್ವಕಪ್ ಕ್ರಿಕೆಟ್‌ ಫೈನಲ್ ಪಂದ್ಯದಲ್ಲಿ ಸೋಲು ಅನುಭವಿಸಿದ ಟೀಂ ಇಂಡಿಯಾಗೆ ಪ್ರಧಾನಿ ನರೇಂದ್ರ ಮೋದಿ ಧೈರ್ಯ ತುಂಬಿದ್ದಾರೆ.

modi
ಪ್ರಧಾನಿ ನರೇಂದ್ರ ಮೋದಿ

By ANI

Published : Nov 20, 2023, 7:10 AM IST

Updated : Nov 20, 2023, 8:32 AM IST

ನವದೆಹಲಿ: ಐಸಿಸಿ ವಿಶ್ವಕಪ್ 2023ರ ಫೈನಲ್ ಪಂದ್ಯದಲ್ಲಿ ಭಾರತವನ್ನು ಸೋಲಿಸುವ ಮೂಲಕ ಆಸ್ಟ್ರೇಲಿಯಾ ಆರು ವಿಕೆಟ್‌ಗಳ ಜಯ ಸಾಧಿಸಿದ್ದು, 6ನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಈ ಮೂಲಕ ಮೂರನೇ ಬಾರಿ ಪ್ರತಿಷ್ಟಿತ ಪ್ರಶಸ್ತಿ ಗೆಲ್ಲುವ ಭಾರತದ ಕನಸು ಭಗ್ನಗೊಂಡಿತು. ಇದರೊಂದಿಗೆ ಭಾರತ ಸಂಪೂರ್ಣವಾಗಿ ಆತಿಥ್ಯ ವಹಿಸಿದ್ದ ವಿಶ್ವಕಪ್ ಟೂರ್ನಿಯ ಅಂತಿಮ ಹಂತ ಅತ್ಯಂತ ನಿರಾಶಾದಾಯಕವಾಗಿ ಕೊನೆಗೊಂಡಿದೆ.

ಈ ಕುರಿತು ಪ್ರಧಾನಿ ಮೋದಿ ಸಾಮಾಜಿಕ ಮಾಧ್ಯಮ ಎಕ್ಸ್‌​ನಲ್ಲಿ ಟೀಂ ಇಂಡಿಯಾಕ್ಕೆ ಧೈರ್ಯ ಹೇಳಿದ್ದಾರೆ. 'ಆತ್ಮೀಯ ಟೀಂ ಇಂಡಿಯಾ, ವಿಶ್ವಕಪ್‌ನಲ್ಲಿ ನಿಮ್ಮ ಪ್ರತಿಭೆ ಮತ್ತು ದೃಢಸಂಕಲ್ಪ ಗಮನಾರ್ಹವಾಗಿದೆ' ಎಂದು ಅವರು ಬರೆದಿದ್ದಾರೆ. 'ನೀವು ಉತ್ತಮ ಉತ್ಸಾಹದಿಂದ ಆಟವಾಡಿದ್ದೀರಿ ಮತ್ತು ದೇಶಕ್ಕೆ ದೊಡ್ಡ ಹೆಮ್ಮೆ ತಂದಿದ್ದೀರಿ. ನಾವು ಇಂದು ಮತ್ತು ಯಾವಾಗಲೂ ನಿಮ್ಮೊಂದಿಗೆ ಇರುತ್ತೇವೆ' ಎಂದು ತಿಳಿಸಿದ್ದಾರೆ.

ಮತ್ತೊಂದು ಪೋಸ್ಟ್‌ನಲ್ಲಿ, ವಿಶ್ವಕಪ್ ಗೆಲುವಿಗಾಗಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡವನ್ನು ಅಭಿನಂದಿಸಿದ್ದಾರೆ. 'ಭವ್ಯವಾದ ವಿಶ್ವಕಪ್ ಗೆದ್ದಿರುವ ಆಸ್ಟ್ರೇಲಿಯಾಕ್ಕೆ ಅಭಿನಂದನೆಗಳು. ತಂಡ ಉತ್ತಮ ಪ್ರದರ್ಶನ ನೀಡಿದ್ದು, ಪಂದ್ಯಾವಳಿ ಅದ್ಭುತ ವಿಜಯೋತ್ಸವದಲ್ಲಿ ಅಂತ್ಯಗೊಂಡಿದೆ. ಗಮನಾರ್ಹವಾಗಿ ಆಟವಾಡಿದ ಟ್ರಾವಿಸ್ ಹೆಡ್‌ಗೆ ಅಭಿನಂದನೆಗಳು" ಎಂದು ಹೇಳಿದ್ದಾರೆ.

ಇದಕ್ಕೂ ಮೊದಲು ಫೈನಲ್ ಪಂದ್ಯ ವೀಕ್ಷಿಸಲು ಮೋದಿ ಮತ್ತು ಆಸ್ಟ್ರೇಲಿಯಾದ ಉಪ ಪ್ರಧಾನಿ ರಿಚರ್ಡ್ ಮಾರ್ಲ್ಸ್ ಅಹಮದಾಬಾದ್‌ಗೆ ಆಗಮಿಸಿದ್ದರು. ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮೋದಿ ಅವರನ್ನು ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್, ರಾಜ್ಯಪಾಲ ಆಚಾರ್ಯ ದೇವವ್ರತ್ ಮತ್ತು ಗುಜರಾತ್ ಭಾರತೀಯ ಜನತಾ ಪಕ್ಷದ ಮುಖ್ಯಸ್ಥ ಸಿ.ಆರ್.ಪಾಟೀಲ್ ಸ್ವಾಗತಿಸಿದ್ದರು. ಗೃಹ ಸಚಿವ ಅಮಿತ್ ಶಾ ಕೂಡ ಪಂದ್ಯ ವೀಕ್ಷಿಸಲು ಆಗಮಿಸಿದ್ದರು.

ಫೈನಲ್ ಪಂದ್ಯದ ಸಂಕ್ಷಿಪ್ತ ಮಾಹಿತಿ: ಮೊದಲು ಬ್ಯಾಟಿಂಗ್ ಮಾಡಿದ ಭಾರತ 240 ರನ್‌ಗಳಿಗೆ ಸೀಮಿತವಾಯಿತು. ಮಿಚೆಲ್ ಸ್ಟಾರ್ಕ್ ನೇತೃತ್ವದ ಆಸೀಸ್ ಬೌಲರ್‌ಗಳ ಅದ್ಭುತ ಪ್ರದರ್ಶನ ಹಾಗು ಟ್ರಾವಿಸ್ ಹೆಡ್ ಅವರ ಶತಕದಾಟ ಭಾರತಕ್ಕೆ ಮುಳುವಾಯಿತು. ಹೆಡ್ 120 ಎಸೆತಗಳಲ್ಲಿ 137 ರನ್ ಗಳಿಸುವುದರೊಂದಿಗೆ ತಂಡ 43 ಓವರ್‌ಗಳಲ್ಲಿ 241 ರನ್ ಗಳಿಸಿತು. ಅಂತಿಮವಾಗಿ ಆತಿಥೇಯರ ವಿಶ್ವ ಚಾಂಪಿಯನ್ ಆಗುವ ಕನಸು ಭಗ್ನಗೊಂಡಿತು.

ಇದನ್ನೂ ಓದಿ:ವಿಶ್ವಕಪ್​ ಫೈನಲ್​ : ವಿರಾಟ್​ ಕೊಹ್ಲಿಗೆ ಪ್ಲೇಯರ್​ ಆಫ್​ ದಿ ಟೂರ್ನಮೆಂಟ್‌ ಪ್ರಶಸ್ತಿ

Last Updated : Nov 20, 2023, 8:32 AM IST

ABOUT THE AUTHOR

...view details