ತರೌಬಾ (ವೆಸ್ಟ್ ಇಂಡೀಸ್):ಭಾರತ ತಂಡವು 'ಅಹಂಕಾರಿ' ಆಗುತ್ತಿದೆ ಎಂಬ ಮಾಜಿ ನಾಯಕ ಕಪಿಲ್ ದೇವ್ ಅವರ ವ್ಯಂಗ್ಯಕ್ಕೆ ಸ್ಟಾರ್ ಇಂಡಿಯಾ ಆಲ್‌ರೌಂಡರ್ ರವೀಂದ್ರ ಜಡೇಜಾ ಪ್ರತಿಕ್ರಿಯಿಸಿದ್ದು, "ಭಾರತ ಪಂದ್ಯಗಳಲ್ಲಿ ಸೋತಾಗ ಜನರು ಅಂತಹ ಕಾಮೆಂಟ್‌ಗಳನ್ನು ಮಾಡುತ್ತಾರೆ" ಎಂದು ಹೇಳಿದ್ದಾರೆ. ಇತ್ತೀಚೆಗೆ, ಕಪಿಲ್ ಪ್ರಸ್ತುತ ಭಾರತ ತಂಡದಲ್ಲಿ ದುರಹಂಕಾರವು ಹರಿದಾಡಿದೆ ಮತ್ತು ಆಟಗಾರರು ತಮಗೆ ಎಲ್ಲವೂ ತಿಳಿದಿದೆ ಎಂದು ಭಾವಿಸುತ್ತಾರೆ ಎಂದು ಹೇಳಿದರು.
ಇಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ ಸರಣಿ ನಿರ್ಣಾಯಕ ಮೂರನೇ ಏಕದಿನ ಪಂದ್ಯದ ಮುನ್ನಾ ದಿನದಂದು ಸುದ್ದಿಗಾರರೊಂದಿಗೆ ಮಾತನಾಡಿದ ಜಡೇಜಾ, ಆಟಗಾರರು ಭಾರತವನ್ನು ಗೆಲ್ಲುವತ್ತ ಮಾತ್ರ ಗಮನಹರಿಸಿದ್ದಾರೆ ಮತ್ತು ಯಾವುದೇ ವೈಯಕ್ತಿಕ ಅಜೆಂಡಾ ಹೊಂದಿಲ್ಲ ಎಂದು ಹೇಳಿದರು. "ಪ್ರತಿಯೊಬ್ಬರೂ ತಮ್ಮದೇ ಆದ ಅಭಿಪ್ರಾಯವನ್ನು ಹೊಂದಿದ್ದಾರೆ. ಮಾಜಿ ಆಟಗಾರರು ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಲು ಸಂಪೂರ್ಣ ಹಕ್ಕು ಹೊಂದಿದ್ದಾರೆ. ಆದರೆ ಈ ತಂಡದಲ್ಲಿ ಯಾವುದೇ ದುರಹಂಕಾರವಿದೆ ಎಂದು ನಾನು ಭಾವಿಸುವುದಿಲ್ಲ" ಎಂದು ಜಡೇಜಾ ಹೇಳಿದರು.
"ಪ್ರತಿಯೊಬ್ಬರೂ ಅವರವರ ಕ್ರಿಕೆಟ್ ಅನ್ನು ಆನಂದಿಸುತ್ತಿದ್ದಾರೆ ಮತ್ತು ಎಲ್ಲರೂ ಕಷ್ಟಪಟ್ಟು ದುಡಿಯುತ್ತಿದ್ದಾರೆ. ಯಾರೂ ಏನನ್ನೂ ಲಘುವಾಗಿ ತೆಗೆದುಕೊಂಡಿಲ್ಲ. ಅವರು ತಮ್ಮ ಶೇಕಡಾ 100 ಅನ್ನು ನೀಡುತ್ತಿದ್ದಾರೆ. ಸಾಮಾನ್ಯವಾಗಿ ಭಾರತ ತಂಡವು ಪಂದ್ಯವನ್ನು ಕಳೆದುಕೊಂಡಾಗ ಇಂತಹ ಕಾಮೆಂಟ್‌ಗಳು ಬರುತ್ತವೆ. ಇದು ಉತ್ತಮ ಹುಡುಗರ ಗುಂಪು. ನಾವು ಭಾರತವನ್ನು ಪ್ರತಿನಿಧಿಸುತ್ತಿದ್ದೇವೆ ಮತ್ತು ಅದು ನಮ್ಮ ಮುಖ್ಯ ಗುರಿಯಾಗಿದೆ, ಯಾವುದೇ ವೈಯಕ್ತಿಕ ಅಜೆಂಡಾ ಇಲ್ಲ" ಎಂದು ಅವರು ಸ್ಪಷ್ಟಪಡಿಸಿದರು.
ಏಷ್ಯಾಕಪ್ ಪ್ಲೇಯಿಂಗ್ ಇಲವೆನ್ ಈಗಾಗಲೇ ನಿರ್ಧರಿಸಲಾಗಿದೆ:ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿನ ಪ್ರಯೋಗಗಳ ಹೊರತಾಗಿಯೂ ಆಗಸ್ಟ್ 30ರಿಂದ ಪ್ರಾರಂಭವಾಗುವ ಏಷ್ಯಾಕಪ್‌ಗೆ ಆಡುವ ಹನ್ನೊಂದರ ಬಳಗವನ್ನು ಈಗಾಗಲೇ ನಿರ್ಧರಿಸಲಾಗಿದೆ ಎಂದು ಜಡೇಜಾ ಹೇಳಿದರು. ಮೂರು ಪಂದ್ಯಗಳ ಸರಣಿಯ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ನಿಯಮಿತ ನಾಯಕ ರೋಹಿತ್ ಶರ್ಮಾ ಮತ್ತು ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಿ ಮೈದಾನಕ್ಕಿಳಿದು ಆರು ವಿಕೆಟ್‌ಗಳ ಸೋಲನುಭವಿಸಿತು. ಪ್ರಯೋಗ ಮಾಡಿದ್ದ ಮೊದಲ ಪಂದ್ಯವನ್ನು ಭಾರತ ಐದು ವಿಕೆಟ್‌ಗಳಿಂದ ಗೆದ್ದಿತ್ತು.
"ಇದು ಏಷ್ಯಾಕಪ್ ಮತ್ತು ವಿಶ್ವಕಪ್‌ಗೆ ಮುಂಚಿನ ಸರಣಿಯಾಗಿದೆ, ಅಲ್ಲಿ ನಾವು ಪ್ರಯೋಗ ಮಾಡಬಹುದು, ನಾವು ಹೊಸ ಸಂಯೋಜನೆಗಳನ್ನು ಪ್ರಯತ್ನಿಸಬಹುದು. ಇದು ತಂಡದ ಸಮತೋಲನ, ಸಾಮರ್ಥ್ಯ ಮತ್ತು ದೌರ್ಬಲ್ಯಗಳ ಬಗ್ಗೆ ನಮಗೆ ಕಲ್ಪನೆಯನ್ನು ನೀಡುತ್ತದೆ. ನಾಯಕ ಮತ್ತು ತಂಡದ ಮ್ಯಾನೇಜ್‌ಮೆಂಟ್‌ಗೆ ಅವರು ಯಾವ ಸಂಯೋಜನೆಯಲ್ಲಿ ಮುಂದೆ ಆಡಲಿದ್ದಾರೆ ಎಂಬುದು ತಿಳಿದಿದೆ. ಅದರಲ್ಲಿ ಯಾವುದೇ ಗೊಂದಲವಿಲ್ಲ. ಮ್ಯಾನೇಜ್‌ಮೆಂಟ್ ಈಗಾಗಲೇ ಏಷ್ಯಾಕಪ್‌ನ ಸಂಯೋಜನೆಯನ್ನು ನಿರ್ಧರಿಸಿದೆ. ಆದರೆ ತಂಡದ ಬ್ಯಾಟರ್ ಮತ್ತು ಬೌಲರ್ಗಳ ಸಾಮರ್ಥ್ಯವನ್ನು ಕೆಲ ಪ್ರಯೋಗದ ಮೂಲಕ ಪರೀಕ್ಷೆ ಮಾಡಲಾಗುತ್ತಿದೆ" ಎಂದೆ ಹೇಳಿದ್ದಾರೆ.
ಮಂಗಳವಾರ ನಡೆಯಲಿರುವ ಸರಣಿ ನಿರ್ಧಾರಕ ಮೂರನೇ ಪಂದ್ಯದಲ್ಲಿ ಭಾರತ ಯುವ ಆಟಗಾರರಿಗೆ ಹೆಚ್ಚು ಅವಕಾಶ ನೀಡುವ ಸಾಧ್ಯತೆ ಬಗ್ಗೆ ಇದೇ ವೇಳೆ ಜಡೇಜ ಹೇಳಿದ್ದಾರೆ. ಎರಡನೇ ಏಕದಿನ ಪಂದ್ಯದ ಸೋಲಿನ ಬಗ್ಗೆ ಮಾತನಾಡಿದ ಜಡೇಜಾ, "ನಾವು ಸೋಲಿನಿಂದ ನಿರಾಶೆಗೊಂಡಿಲ್ಲ. ಪ್ರಯೋಗಗಳಿಂದಾಗಿ ನಾವು ಪಂದ್ಯವನ್ನು ಸೋತಿಲ್ಲ, ಕೆಲವೊಮ್ಮೆ ಪರಿಸ್ಥಿತಿಗಳು ಸಹ ಮುಖ್ಯವಾಗಿದೆ. ನಾವು ವಿಭಿನ್ನ ಸಂಯೋಜನೆಗಳನ್ನು ಪ್ರಯತ್ನಿಸುತ್ತಿದ್ದೇವೆ. ನಾವು ವಿಭಿನ್ನ ಸ್ಥಾನದಲ್ಲಿ ವಿಭಿನ್ನ ಬ್ಯಾಟರ್‌ಗಳನ್ನು ಆಡಿಸುತ್ತಿದ್ದೇವೆ. ವೆಸ್ಟ್ ಇಂಡೀಸ್ ಪ್ರವಾಸ ಆಟಗಾರರ ಮೇಲೆ ಪ್ರಯೋಗ ಮಾಡಲು ಸೂಕ್ತ ಸರಣಿಯಾಗಿದೆ. ಅಲ್ಲದೇ ಯುವ ಆಟಗಾರರಿಗೆ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಆಡಿದ ಅನುಭವ ಬೇಕಾಗುತ್ತದೆ. ಅದಕ್ಕಾಗಿ ಅವರಿಗೆ ಹೆಚ್ಚಿನ ಸಮಯ ನೀಡುವ ಅಗತ್ಯವಿದೆ" ಎಂದಿದ್ದಾರೆ.
ಇದನ್ನೂ ಓದಿ:Kapil Dev: 'ಗಾಯವಾದ್ರೂ ಐಪಿಎಲ್ನಲ್ಲಿ ಆಡ್ತೀರಿ, ಟೀಂ ಇಂಡಿಯಾಕ್ಕೆ ಯಾಕೆ ಆಡಲ್ಲ?': ಕಪಿಲ್ ದೇವ್ ಕಿಡಿ