ಲಾಹೋರ್ (ಪಾಕಿಸ್ತಾನ): ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) 2023 ರ ಏಷ್ಯಾ ಕಪ್ ಅನ್ನು "ಹೈಬ್ರಿಡ್ ಮಾಡೆಲ್"ನಲ್ಲಿ ನಡೆಸುವ ಬಗ್ಗೆ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಗೆ ಶಿಫಾರಸು ಮಾಡಿದೆ. ಟೂರ್ನಿಯಲ್ಲಿ ಪಾಕಿಸ್ತಾನವು ತನ್ನ ಪಂದ್ಯಗಳನ್ನು ತವರಿನಲ್ಲಿ ಆಡಲಿದೆ. ಭಾರತವು ತಮ್ಮ ಪಂದ್ಯಗಳನ್ನು ತಟಸ್ಥ ಸ್ಥಳದಲ್ಲಿ ಆಡುತ್ತದೆ ಎಂದು ಪಿಸಿಬಿ ಅಧ್ಯಕ್ಷ ನಜಮ್ ಸೇಥಿ ಶುಕ್ರವಾರ ಹೇಳಿದ್ದಾರೆ.
ಕಳೆದ ಅಕ್ಟೋಬರ್‌ನಲ್ಲಿ ಬಿಸಿಸಿಐ ಕಾರ್ಯದರ್ಶಿ ಮತ್ತು ಎಸಿಸಿ ಅಧ್ಯಕ್ಷ ಜಯ್ ಶಾ ಅವರು ಭಾರತ 2023ರ ಏಷ್ಯಾ ಕಪ್ಗೆ ಪಾಕಿಸ್ತಾನ ಪ್ರವಾಸ ಮಾಡುವುದಿಲ್ಲ ಎಂದಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಪಿಸಿಬಿ, ಏಷ್ಯಾ ಕಪ್ ಅನ್ನು ಬೇರೆ ದೇಶದಲ್ಲಿ ಅಥವಾ ತಟಸ್ಥ ಸ್ಥಳದಲ್ಲಿ ಆಯೋಜನೆ ಮಾಡಿದರೆ ಆಟದಿಂದ ಹೊರಗುಳಿಯುವುದಾಗಿ ತಿಳಿಸಿತ್ತು.
ಈ ನಡುವೆ, ಪಾಕಿಸ್ತಾನವು ಸಾಧ್ಯವಾದಷ್ಟು ಪಂದ್ಯಾವಳಿಯನ್ನು ಪಾಕಿಸ್ತಾನದಲ್ಲಿ ಆಯೋಜಿಸುವ ಗುರಿ ಹೊಂದಿದೆ. ಶಾಂಘೈ ಸಹಕಾರ ಸಂಸ್ಥೆ ಕೌನ್ಸಿಲ್ ಸಭೆಗೆ ಮುಂದಿನ ತಿಂಗಳು ಗೋವಾಕ್ಕೆ ತನ್ನ ದೇಶದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೊ ಜರ್ದಾರಿ ಉಪಸ್ಥಿತಿಯು ಪರಿಹಾರ ಕಂಡುಕೊಳ್ಳಲು ಸಹಾಯ ಮಾಡುತ್ತದೆ ಎಂದು ಸೇಥಿ ನಿರೀಕ್ಷಿಸಿದ್ದಾರೆ.
"ಬಹುಶಃ ಮಂಜುಗಡ್ಡೆ ಕರಗುತ್ತಲೇ ಇರುತ್ತದೆ ಎಂದು ನಮಗೆ ತಿಳಿಸಲಾಗಿದೆ. 2025 ರಲ್ಲಿ ಪಾಕಿಸ್ತಾನದಲ್ಲಿ ಚಾಂಪಿಯನ್ಸ್ ಟ್ರೋಫಿ ನಡೆಯುವಾಗ ಭಾರತ ಪಾಕಿಸ್ತಾನಕ್ಕೆ ಬರಬಹುದು. ಏಷ್ಯಾ ಕಪ್ ಅನ್ನು ತಟಸ್ಥ ಸ್ಥಳದಲ್ಲಿ ಆಡಲು ನಮಗೆ ಸಲಹೆ ನೀಡಲಾಗಿದೆ. ವಿಶ್ವಕಪ್‌ಗಾಗಿ ಭಾರತಕ್ಕೆ ಹೋಗುವುದಕ್ಕೆ ನಾವು ಸಹ ಇದೇ ಪ್ರಶ್ನೆ ಮಾಡುತ್ತೇವೆ" ಎಂದು ಪತ್ರಿಕಾ ಸಂವಾದದಲ್ಲಿ ಸೇಥಿ ಹೇಳಿದ್ದಾರೆ.