ಕೊಲಂಬೋ:ಮಹತ್ವದ ಪಂದ್ಯಕ್ಕೆ ಸತತ ಮಳೆ ಅಡ್ಡಿ ನಡುವೆ ಬ್ಯಾಟಿಂಗ್ ವೈಫಲ್ಯ ಅಬುಭವಿಸಿದ ಪಾಕಿಸ್ತಾನ, ಶ್ರೀಲಂಕಾ ವಿರುದ್ಧ 7 ವಿಕೆಟ್ಗೆ 252 ರನ್ ಗಳಿಸಿತು. 130 ರನ್ಗೆ 5 ವಿಕೆಟ್ ಕಳೆದುಕೊಂಡು ಕುಸಿತದ ಹಾದಿ ಹಿಡಿದಿದ್ದ ತಂಡಕ್ಕೆ ಮೊಹಮದ್ ರಿಜ್ವಾನ್, ಇಫ್ತಿಕಾರ್ ಅಹ್ಮದ್ ಉತ್ತಮ ಬ್ಯಾಟ್ ಮಾಡಿ ಆಸರೆಯಾದರು.
ಮಳೆಯ ಕಾರಣಕ್ಕಾಗಿ 45 ಓವರ್ಗೆ ಪಂದ್ಯ ಕಡಿತ ಮಾಡಲಾಗಿತ್ತು. ಆರಂಭದಲ್ಲೇ ಫಖರ್ ಜಮಾನ್(4) ವಿಕೆಟ್ ಪಡೆದು ಲಂಕಾ ಉತ್ತಮ ಆರಂಭ ಪಡೆದುಕೊಂಡಿತು. ಇದರ ಬಳಿಕ ನೆಲೆಯೂರಲು ಶುರು ಮಾಡಿದ ನಾಯಕ ಬಾಬರ್ ಅಜಂರನ್ನು(29) ವೆಲ್ಲಲಗ ತಮ್ಮ ಸ್ಪಿನ್ ಗಾಳಕ್ಕೆ ಸಿಲುಕಿಸಿ ಔಟ್ ಮಾಡಿ ತಂಡಕ್ಕೆ ದೊಡ್ಡ ಮುನ್ನಡೆ ತಂದುಕೊಟ್ಟರು. ಅರ್ಧಶತಕ ಗಳಿಸಿ ಆಡುತ್ತಿದ್ದ ಅಬ್ದುಲ್ಲಾ ಶಫೀಕ್(52) ಪತಿರಣ ವೇಗಕ್ಕೆ ಬಲಿಯಾದರು.
ಬೆನ್ನಲ್ಲೇ ಮೊಹಮದ್ ಹ್ಯಾರೀಸ್(3), ಮೊಹಮದ್ ನವಾಜ್ (12) ವಿಕೆಟ್ ಕಳೆದುಕೊಂಡ ಪಾಕ್ 27.4 ಓವರ್ಗಳಲ್ಲಿ 130 ರನ್ಗಳಿಸಿತ್ತು. ಅದಾಗಲೇ ಅಗ್ರ ಐವರು ಬ್ಯಾಟರ್ಗಳು ಪೆವಿಲಿಯನ್ ಸೇರಿದ್ದರು.
ಮಳೆ ಅಡ್ಡಿ ಮತ್ತೆ ಓವರ್ ಕಡಿತ:ಪಾಕ್ ಮೇಲೆ ಲಂಕಾ ಸವಾರಿ ನಡೆಸುತ್ತಿದ್ದಾಗ ಮತ್ತೆ ಮಳೆ ಬಂದು ಆಟ ನಿಂತಿತು. ಅರ್ಧಗಂಟೆಗೂ ಹೆಚ್ಚು ಕಾಲ ಆಟ ಸ್ಥಗಿತವಾದ ಕಾರಣ ಓವರ್ಗಳನ್ನು 42 ಕ್ಕೆ ಇಳಿಸಲಾಯಿತು. ಈ ವೇಳೆಗೆ ಪಾಕ್ ತಂಡ 27.4 ಓವರ್ಗಳಲ್ಲಿ 5 ವಿಕೆಟ್ಗೆ 130 ರನ್ ಗಳಿಸಿತ್ತು. ಮಳೆ ನಿಂತ ಬಳಿಕ ಮೈದಾನ ಸಿಬ್ಬಂದಿ ನೀರನ್ನು ಹೊರಹಾಕಿ ಆಟಕ್ಕೆ ಅನುವು ಮಾಡಿಕೊಟ್ಟರು.
ರಿಜ್ವಾನ್- ಅಹ್ಮದ್ ಜೊತೆಯಾಟ:200 ರ ಗಡಿಯೊಳಗೆ ತಂಡ ಆಲೌಟ್ ಆಗುವ ಆತಂಕದಲ್ಲಿದ್ದಾಗ ಈ ವೇಳೆ ಜೊತೆಯಾದ ಮೊಹಮದ್ ರಿಜ್ವಾನ್ ಮತ್ತು ಇಫ್ತಿಕಾರ್ ಅಹ್ಮದ್ ತಂಡವನ್ನು ಮೇಲೆತ್ತಿದರು. ಇಬ್ಬರೂ ಸೇರಿ 108 ರನ್ಗಳ ಜೊತೆಯಾಟ ನೀಡಿದರು. ಅಹದ್ 47 ರನ್ ಗಳಿಸಿದರೆ, ರಿಜ್ವಾನ್ ಔಟಾಗದೆ 86 ರನ್ ಮಾಡಿದರು. ಕೊನೆಯಲ್ಲಿ ಪಾಕ್ 42 ಓವರ್ಗಳಲ್ಲಿ 7 ವಿಕೆಟ್ಗೆ 252 ರನ್ ಗಳಿಸಿತು. ಸಿಂಹಳೀಯರ ಪರವಾಗಿ ಮತೀಶ್ ಪತಿರಣ 3 ವಿಕೆಟ್ ಕಿತ್ತರೆ, ಪಂದ್ಯದಲ್ಲಿ ಅವಕಾಶ ಪಡೆದ ಪ್ರಮೋದ್ ಮದುಶನ್ 2 ವಿಕೆಟ್ ಪಡೆದು ಮಿಂಚಿದರು.
ಆಟ ಆರಂಭಿಸಿರುವ ಶ್ರೀಲಂಕಾ 2 ಓವರ್ಗಳಲ್ಲಿ 11 ರನ್ ಗಳಿಸಿದೆ.
ಇದನ್ನೂ ಓದಿ:ಏಷ್ಯಾಕಪ್: ಟಾಸ್ ಗೆದ್ದ ಪಾಕಿಸ್ತಾನ ಬ್ಯಾಟಿಂಗ್.. ಮಳೆ ಅಡ್ಡಿಯಿಂದಾಗಿ 45 ಓವರ್ಗೆ ಪಂದ್ಯ ಕಡಿತ