ಮುಲ್ತಾನ್:ಏಷ್ಯಾಕಪ್ 2023 ಉದ್ಘಾಟನಾ ಪಂದ್ಯದಲ್ಲಿ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ ಹೊಸ ದಾಖಲೆಗಳನ್ನು ಬರೆದಿದ್ದಾರೆ. 151 ರನ್ ಬಾರಿಸಿದ ಬಾಬರ್ 19ನೇ ಶತಕ ಪೂರೈಸಿದರು. ಅಲ್ಲದೇ, ಅತಿ ಕಡಿಮೆ (102) ಇನ್ನಿಂಗ್ಸ್ಗಳಲ್ಲಿ 19 ಸೆಂಚುರಿ ಗಳಿಸಿದ ವಿಶ್ವದ ಮೊದಲ ಆಟಗಾರ ಎಂಬ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡರು.
131 ಎಸೆತಗಳಲ್ಲಿ 151 ರನ್ ಬಾರಿಸಿದ ಬಾಬರ್, 42ನೇ ಓವರ್ನಲ್ಲಿ ಮೂರಂಕಿ ಮೊತ್ತ ತಲುಪಿದರು. ಇದರೊಂದಿಗೆ ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಹಾಸಿಂ ಆಮ್ಲ ಅವರ ರೆಕಾರ್ಡ್ ಬ್ರೇಕ್ ಮಾಡಿದರು. ಆಮ್ಲ 104 ಏಕದಿನ ಇನ್ನಿಂಗ್ಸ್ಗಳಿಂದ 19 ಶತಕಗಳನ್ನು ಬಾರಿಸಿದ್ದರು. ಆಮ್ಲ ಬಳಿಕದ ಸ್ಥಾನದಲ್ಲಿ ರನ್ ಮಷಿನ್ ವಿರಾಟ್ ಕೊಹ್ಲಿ (124 ಇನ್ನಿಂಗ್ಸ್), ಆಸ್ಟ್ರೇಲಿಯಾದ ಡೆವಿಡ್ ವಾರ್ನರ್ (139), ಎಬಿಡಿ ವಿಲಿಯರ್ಸ್ (171) ಹಾಗೂ ರೋಹಿತ್ ಶರ್ಮಾ (181) ಅವರು ಇದ್ದಾರೆ.
ಜೊತೆಗೆ ಬಾಬರ್ ಪಾಕ್ ಪರ ಅತಿಹೆಚ್ಚು ಏಕದಿನ ಶತಕ ಬಾರಿಸಿದವರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಬ್ಯಾಟಿಂಗ್ ದಿಗ್ಗಜ ಸಯೀದ್ ಅನ್ವರ್ 20 ಶತಕಗಳೊಂದಿಗೆ ಅಗ್ರರಾಗಿದ್ದಾರೆ. ಅಲ್ಲದೇ, ಬಾಬರ್ಗೆ ಇದು ಒಟ್ಟಾರೆ 31ನೇ ಅಂತಾರಾಷ್ಟ್ರೀಯ ಶತಕವಾಗಿದ್ದು, ಜಾವೇದ್ ಮಿಯಾಂದಾದ್ ಹಾಗೂ ಸಯೀದ್ ಅನ್ವರ್ ಅವರ ದಾಖಲೆ ಸರಿಗಟ್ಟಿದ್ದಾರೆ.