ಕರಾಚಿ(ಪಾಕಿಸ್ತಾನ): ಭಾರತ-ಪಾಕಿಸ್ತಾನ ಕ್ರಿಕೆಟ್ ತಂಡಗಳು ಸಾಂಪ್ರದಾಯಿಕ ಕ್ರಿಕೆಟ್ ಎದುರಾಳಿಗಳು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಮೈದಾನದಲ್ಲಿ ಈ ತಂಡಗಳು ಮುಖಾಮುಖಿಯಾದಾಗ ಉಭಯ ದೇಶದ ಕ್ರಿಕೆಟ್ ಪ್ರೇಮಿಗಳ ಎದೆಬಡಿತ ಸಾಮಾನ್ಯವಾಗಿ ಹೆಚ್ಚಾಗುತ್ತದೆ. ಆದರೆ, ಎರಡು ತಂಡದ ಕ್ರಿಕೆಟರ್ಸ್ ಮೈದಾನದಲ್ಲಿ ಪ್ರೀತಿ-ವಿಶ್ವಾಸದಿಂದ ಮಾತನಾಡಿ ಹಲವು ಬಾರಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಇದೀಗ, ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಮಾಡಿರುವ ಕೆಲಸವೊಂದು ಅಂತಹ ಘಟನೆಗೆ ಸಾಕ್ಷಿಯಾಗಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕ್ಯಾಪ್ಟನ್ ಆಗಿರುವ ಧೋನಿ ಪಾಕಿಸ್ತಾನದ ಯುವ ವೇಗಿ ಹ್ಯಾರಿಸ್ ರೌಫ್ಗೆ ತಮ್ಮ ಸಿಎಸ್ಕೆ ಜೆರ್ಸಿ ಉಡುಗೊರೆಯಾಗಿ ನೀಡಿದ್ದಾರೆ. ಈ ವಿಚಾರವನ್ನು ಟ್ವೀಟ್ ಮಾಡುವ ಮೂಲಕ ಹ್ಯಾರಿಸ್ ರೌಫ್ ಖುದ್ದಾಗಿ ಬಹಿರಂಗಗೊಳಿಸಿದ್ದಾರೆ.
ಪಾಕಿಸ್ತಾನ ತಂಡದ ವೇಗಿ ಹ್ಯಾರಿಸ್ ರೌಫ್, ಮಹೇಂದ್ರ ಸಿಂಗ್ ಧೋನಿ ನೀಡಿರುವ 7ನಂಬರ್ ಜೆರ್ಸಿ ಚಿತ್ರವನ್ನು ತಮ್ಮ ಟ್ವೀಟರ್ ಅಕೌಂಟ್ನಲ್ಲಿ ಹಾಕಿಕೊಂಡಿದ್ದು, ತಮ್ಮ ಸಂತೋಷ ಹೊರಹಾಕಿದ್ದಾರೆ. ಜೊತೆಗೆ ಲೆಜೆಂಡ್ ಮತ್ತು ಕ್ಯಾಪ್ಟನ್ ಕೂಲ್ ಧೋನಿ ಸುಂದರವಾದ ಉಡುಗೊರೆ ನೀಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ:ಮೂವರು ಕ್ರಿಕೆಟಿಗರ ಮೇಲಿನ ನಿಷೇಧ ಹಿಂಪಡೆದ ಲಂಕಾ ಕ್ರಿಕೆಟ್ ಮಂಡಳಿ
ಪಾಕಿಸ್ತಾನದ ಪರ ಹ್ಯಾರಿಸ್ ಇಲ್ಲಿಯವರೆಗೆ 34 ಟಿ20 ಪಂದ್ಯಗಳನ್ನಾಡಿದ್ದು, 41 ವಿಕೆಟ್ ಪಡೆದುಕೊಂಡಿದ್ದಾರೆ. ಜೊತೆಗೆ ಏಕದಿನ ಪಂದ್ಯದಲ್ಲಿ 8 ಪಂದ್ಯಗಳಿಂದ 14 ವಿಕೆಟ್ ಕಿತ್ತಿದ್ದಾರೆ. ಪ್ರಸ್ತುತ ಆಸ್ಟ್ರೇಲಿಯಾದಲ್ಲಿ ನಡೆಯತ್ತಿರುವ ಬಿಗ್ ಬ್ಯಾಷ್ ಲೀಗ್ನಲ್ಲಿ ಮೆಲ್ಬೋರ್ನ್ ಸ್ಟಾರ್ಸ್ ಪರ ಹ್ಯಾರಿಸ್ ಆಡುತ್ತಿದ್ದಾರೆ. ಕಳೆದ ಕೆಲ ತಿಂಗಳ ಹಿಂದೆ ಯುಎಇನಲ್ಲಿ ನಡೆದ ಟಿ20 ವಿಶ್ವಕಪ್ನಲ್ಲಿ ಪಾಕ್ ತಂಡದ ಭಾಗವಾಗಿದ್ದರು.