ಹೈದರಾಬಾದ್:ಪಾಕಿಸ್ತಾನದ ವಿಕೆಟ್ ಕೀಪರ್, ಬ್ಯಾಟರ್ ಮೊಹಮ್ಮದ್ ರಿಜ್ವಾನ್ ಏಕದಿನ ವಿಶ್ವಕಪ್‌ನಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ತಮ್ಮ ತಂಡ ದಾಖಲೆಯ ಗೆಲುವು ಸಾಧಿಸಿದ್ದನ್ನು ಇಸ್ರೇಲ್ ದಾಳಿಗೊಳಗಾಗಿರುವ ಗಾಜಾದ ಜನರಿಗೆ ಅರ್ಪಿಸಿದರು.
ಹೈದರಾಬಾದ್‌ನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಮಂಗಳವಾರ ಶ್ರೀಲಂಕಾ ವಿರುದ್ಧ ನಡೆದ ಪಂದ್ಯದಲ್ಲಿ ರಿಜ್ವಾನ್ (131) ಅಜೇಯ ಶತಕ ಸಿಡಿಸಿದರೆ, ಯುವ ಕ್ರಿಕೆಟಿಗ ಅಬ್ದುಲ್ಲಾ ಶಫೀಕ್ (113) ತಮ್ಮ ಚೊಚ್ಚಲ ಏಕದಿನ ಶತಕ ದಾಖಲಿಸುವ ಮೂಲಕ ತಂಡಕ್ಕೆ ಭರ್ಜರಿ ಗೆಲುವು ತಂದು ಕೊಟ್ಟರು. ಲಂಕಾ ನೀಡಿದ್ದ 345 ರನ್‌ಗಳನ್ನು ಚೇಸ್ ಮಾಡಿದ ತಂಡ ವಿಶ್ವಕಪ್ ಇತಿಹಾಸದಲ್ಲಿಯೇ ದಾಖಲೆಯ ಗುರಿ ಮುಟ್ಟಿತು.
ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ರಿಜ್ವಾನ್, 'ಈ ಗೆಲುವು ಗಾಜಾದಲ್ಲಿರುವ ನಮ್ಮ ಸಹೋದರ ಸಹೋದರಿಯರಿಗೆ ಅರ್ಪಣೆ. ಗೆಲುವಿನಲ್ಲಿ ಕೊಡುಗೆ ನೀಡಿದ್ದು ಸಂತೋಷ ತಂದಿದೆ. ಇಡೀ ತಂಡದ ಶ್ರಮದಿಂದ ಈ ಗೆಲುವು ಸಾಧ್ಯವಾಗಿದೆ. ವಿಶೇಷವಾಗಿ ಗೆಲುವು ಸುಲಭವಾಗಿಸಿದ ಅಬ್ದುಲ್ಲಾ ಶಫೀಕ್, ಹಸನ್ ಅಲಿ ಅವರಿಗೆ ಹೆಚ್ಚಿನ ಶ್ರೇಯ ಸಲ್ಲಬೇಕು. ಅದ್ಭುತ ಆತಿಥ್ಯ ಮತ್ತು ಬೆಂಬಲ ನೀಡಿದ ಹೈದರಾಬಾದ್ ಜನರಿಗೆ ತುಂಬಾ ಕೃತಜ್ಞರಾಗಿರುತ್ತೇನೆ' ಎಂದು ಬರೆದುಕೊಂಡಿದ್ದಾರೆ.