ದುಬೈ:ಬರೋಬ್ಬರಿ 18 ವರ್ಷಗಳ ಬಳಿಕ ಪಾಕಿಸ್ತಾನ ಪ್ರವಾಸ ಕೈಗೊಂಡಿದ್ದ ನ್ಯೂಜಿಲ್ಯಾಂಡ್ ತಂಡ ಭದ್ರತಾ ಕಾರಣ ನೀಡಿ, ತವರಿಗೆ ವಾಪಸ್ ಆಗಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಇದೇ ಮೊದಲ ಸಲ ಕಿವೀಸ್ ತಂಡದ ಕ್ಯಾಪ್ಟನ್ ಟಾಮ್ ಲ್ಯಾಥಮ್ ಮಾತನಾಡಿದ್ದಾರೆ.
ದುಬೈನಲ್ಲಿರುವ ಲಾಥಮ್ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಭದ್ರತಾ ಕಾರಣ ನೀಡಿ ಪ್ರವಾಸದಿಂದ ಹೊರಗುಳಿದಿರುವ ತಂಡದ ನಿರ್ಧಾರದಿಂದ ಪಾಕ್ ಅಭಿಮಾನಿಗಳಿಗೆ ನಿರಾಶೆಯಾಗಿದೆ ಎಂಬುದನ್ನ ಒಪ್ಪಿಕೊಂಡಿದ್ದಾರೆ.
ರಾವಲ್ಪಿಂಡಿ ಪಂದ್ಯಕ್ಕಾಗಿ ನಾವು 12:30ಕ್ಕೆ ಹೋಟೆಲ್ ಬಿಡಲು ನಿರ್ಧಾರ ಮಾಡಿದ್ದೆವು. ಆದರೆ ನನ್ನ ವಾಟ್ಸಾಪ್ ಗ್ರೂಪ್ನಲ್ಲಿ 12 ಗಂಟೆಗೆ ಟೀಂ ಮೀಟಿಂಗ್ ಇದೆ ಎಂದು ಸಂದೇಶ ಬಂದಿತು. ಇದರಿಂದ ನಮ್ಮೆಲ್ಲರಿಗೂ ದಿಢೀರ್ ಶಾಕ್ ಆಯಿತು. ಈ ವೇಳೆ ನಮಗೆ ವಿಷಯ ಗೊತ್ತಾಗುತ್ತಿದ್ದಂತೆ ಸರಣಿ ಕ್ಯಾನ್ಸಲ್ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿದರು. ಈ ಮಾಹಿತಿ ನೀಡಿದ ಬಳಿಕ ಸುಮಾರು 24 ಗಂಟೆಗಳ ಕಾಲ ಪಾಕಿಸ್ತಾನ ನಮ್ಮ ಸುರಕ್ಷತೆ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸಿದ್ದರು. ಹೋಟೆಲ್ನಲ್ಲಿ ಎಲ್ಲ ರೀತಿಯ ಭದ್ರತೆ ಒದಗಿಸಿ, ನಾವು ದುಬೈಗೆ ತೆರಳಲು ವಿಮಾನವೇರುವವರೆಗೂ ಸುರಕ್ಷಿತವಾಗಿ ನೋಡಿಕೊಂಡಿದ್ದಾರೆ. ಅವರಿಗೆ ಧನ್ಯವಾದಗಳು ಎಂದಿದ್ದಾರೆ.