ಕೋಲ್ಕತ್ತಾ, ಪಶ್ಚಿಮ ಬಂಗಾಳ: ಖ್ಯಾತ ಕ್ರಿಕೆಟಿಗ ಹಾಗೂ ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಅವರ ಬಟಾನಗರದಲ್ಲಿರುವ ಜಮೀನನ್ನು ಸ್ಥಳೀಯ ಸಮಾಜ ವಿರೋಧಿಗಳು ಅತಿಕ್ರಮಣ ಮಾಡಲು ಯತ್ನಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಅಷ್ಟೇ ಅಲ್ಲ ಸೌರವ್ ಗಂಗೂಲಿ ಅವರ ಆಪ್ತ ಕಾರ್ಯದರ್ಶಿಗೆ ಕರೆ ಮಾಡಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ಸಂಬಂಧ ವ್ಯಕ್ತಿಯೊಬ್ಬರ ವಿರುದ್ಧ ದೂರು ದಾಖಲಾಗಿದ್ದು, ಪೊಲೀಸರು ವ್ಯಕ್ತಿಯೊಬ್ಬರನ್ನು ಬಂಧಿಸಿದ್ದಾರೆ.
ಸಿಕ್ಕಿದ ಮಾಹಿತಿಯ ಪ್ರಕಾರ, ಸೋಮವಾರ ಸೌರವ್ ಗಂಗೂಲಿ ಅವರ ಜಮೀನಿನಲ್ಲಿ ನಿಯೋಜಿಸಲಾಗಿದ್ದ ಭದ್ರತಾ ಸಿಬ್ಬಂದಿ ಮೇಲೆ ಆ ಪ್ರದೇಶದ ಕೆಲವು ಸಮಾಜ ವಿರೋಧಿಗಳು ಹಲ್ಲೆ ನಡೆಸಿದ್ದಾರೆ. ಈ ವೇಳೆ, ಗಂಗೂಲಿ ಅವರ ನಿವೇಶನದ ಗೇಟ್ ಕೂಡ ಮುರಿದು ಬಿದ್ದಿದೆ. ಗೇಟ್ ಮುರಿದ ನಂತರ, ಸಮಾಜ ವಿರೋಧಿಗಳು ಸೌರವ್ ಗಂಗೂಲಿ ಅವರ ಅಕಾಡೆಮಿಗೆ ಪ್ರವೇಶಿಸಿದ್ದಾರೆ. ಬಳಿಕ ಒಳಗೆ ಸಾಕಷ್ಟು ಗದ್ದಲವನ್ನು ಸೃಷ್ಟಿಸಿದ್ದಾರೆ ಎನ್ನಲಾಗಿದೆ.
ಈ ಘಟನೆ ಬಗ್ಗೆ ಕ್ರಿಕೆಟಿಗ ಸೌರವ್ ಗಂಗೂಲಿ ಅವರ ಕಚೇರಿ ವತಿಯಿಂದ ಠಾಣೆಗೆ ಮಾಹಿತಿ ನೀಡಲಾಗಿದೆ. ಘಟನೆ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಮಹೇಶ್ತಾಲ ಠಾಣೆ ಪೊಲೀಸರು ತಿಳಿಸಿದ್ದಾರೆ. ಆದರೆ, ಈ ಬಗ್ಗೆ ಸೌರವ್ ಗಂಗೂಲಿ ಯಾವುದೇ ಸಾರ್ವಜನಿಕ ಹೇಳಿಕೆ ನೀಡಿಲ್ಲ.
ಏನಿದು ಪ್ರಕರಣ?: ಮಹೇಶ್ತಾಲ ಪೊಲೀಸ್ ಮೂಲಗಳ ಪ್ರಕಾರ, ಸೌರವ್ ಗಂಗೂಲಿ ಅವರ ಹೆಸರಿನಲ್ಲಿ ಬಟಾನಗರದಲ್ಲಿ ಖಾಲಿ ಜಮೀನಿದೆ. ಅಲ್ಲಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಆದರೆ, ಕಳೆದ ಭಾನುವಾರ ಪ್ಲಾಟ್‌ನ ಭದ್ರತೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಸೆಕ್ಯುರಿಟಿ ಗಾರ್ಡ್ನನ್ನು ಗೇಟ್ ತೆರೆಯುವಂತೆ ಕೂಗಿದ್ದಾರೆ.