ಐಸಿಸಿ ವಿಶ್ವಕಪ್ 2023ಗೆ (ICC World Cup 2023) ನ್ಯೂಜಿಲೆಂಡ್ ತಂಡವನ್ನು ಪ್ರಕಟಿಸಲಾಗಿದೆ. ನ್ಯೂಜಿಲೆಂಡ್ ಕ್ರಿಕೆಟ್ (NZC) ತಮ್ಮ ODI ವಿಶ್ವಕಪ್ ತಂಡವನ್ನು ವಿಶೇಷತೆಯೊಂದಿಗೆ ಪ್ರಕಟಿಸಿದೆ. ಕ್ರಿಕೆಟಿಗರ ಮಕ್ಕಳು, ಪತ್ನಿಯರು, ಅಜ್ಜಿ, ಪೋಷಕರು ಕ್ಯಾಪ್ ನಂಬರ್ ಹಾಗೂ ಆಟಗಾರರ ಹೆಸರನ್ನು ಘೋಷಿಸಿರುವ ಮೂಲಕ ನ್ಯೂಜಿಲೆಂಡ್ ತಂಡವನ್ನು ಪರಿಚಯಿಸಿದ್ದಾರೆ. ಅದಕ್ಕಾಗಿ ಸ್ಪೆಷಲ್ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.
ಟೀಂ ಕ್ಯಾಪ್ಟನ್ ಕೇನ್ ವಿಲಿಯಮ್ಸನ್ ಅವರ ಪತ್ನಿ ಮತ್ತು ಮಕ್ಕಳು ನಾಯಕನ ODI ಕ್ಯಾಪ್ ಸಂಖ್ಯೆಯನ್ನು ಹೇಳುವುದರೊಂದಿಗೆ ವಿಡಿಯೋ ಪ್ರಾರಂಭವಾಗುತ್ತದೆ. ನಂತರದಲ್ಲಿ ಟ್ರೆಂಟ್ ಬೌಲ್ಟ್ ಪುತ್ರ, ಮಾರ್ಕ್ ಚಾಪ್ಮನ್ ಪತ್ನಿ, ಡೆವೊನ್ ಕಾನ್ವೇ, ಮ್ಯಾಟ್ ಹೆನ್ರಿ, ಟಾಮ್ ಲ್ಯಾಥಮ್, ಗ್ಲೆನ್ ಫಿಲಿಪ್ಸ್, ಮಿಚೆಲ್ ಸ್ಯಾಂಟನರ್, ಇಶ್ ಸೋಧಿ, ಡ್ಯಾರಿಲ್ ಮಿಥ್ಸೆಲ್ ಮತ್ತು ಟಿಮ್ ಸೌಥಿ ಮಕ್ಕಳು, ಲಾಕಿ ಫರ್ಗುಸನ್ ಅವರ ನಿಶ್ಚಿತ ವಧು, ಜಿಮ್ಮಿ ನೀಶಮ್ ಅವರ ಅಜ್ಜಿ, ವಿಲ್ ಯಂಗ್ ಅವರ ತಾಯಿ ಮತ್ತು ರಚಿನ್ ರವಿಡ್ನ್ರಾ ಅವರ ಪೋಷಕರು ಕ್ಯಾಪ್ ಸಂಖ್ಯೆಯ ಜೊತೆ ಕ್ರಿಕೆಟಿಗರ ಹೆಸರು ಹೇಳುವುದರೊಂದಿಗೆ ನ್ಯೂಜಿಲೆಂಡ್ ತಂಡವನ್ನು ಪರಿಚಯಿಸಲಾಗಿದೆ.
ಭಾರತದಲ್ಲಿ ಅಕ್ಟೋಬರ್ 5ರಿಂದ ಆರಂಭವಾಗಲಿರುವ ಐಸಿಸಿ ವಿಶ್ವಕಪ್ 2023ಗೆ 15 ಸದಸ್ಯರ ನ್ಯೂಜಿಲೆಂಡ್ ತಂಡವನ್ನು ಪ್ರಕಟಿಸಲಾಗಿದೆ. ಬ್ಯಾಟರ್ ಕೇನ್ ವಿಲಿಯಮ್ಸನ್ ಅವರು ನಾಯಕನಾಗಿ ತಂಡಕ್ಕೆ ವಾಪಸ್ ಆಗಿದ್ದಾರೆ. ದೀರ್ಘಕಾಲದ ಮೊಣಕಾಲು ನೋವಿನಿಂದ ಬಳಲುತ್ತಿದ್ದ ಅವರು ಸಂಪೂರ್ಣ ಚೇತರಿಸಿಕೊಂಡಿಲ್ಲವಾದರೂ ತಂಡದ ನಾಯಕನಾಗಿ ಸೇರಿಕೊಂಡಿದ್ದಾರೆ. ಟಾಮ್ ಲ್ಯಾಥಮ್ ಅವರು ಉಪನಾಯಕನಾಗಿ ಆಯ್ಕೆಯಾಗಿದ್ದಾರೆ.