ರಾಂಚಿ(ಜಾರ್ಖಂಡ್):ಇಲ್ಲಿನ ಜೆಎಸ್ಸಿಎ ಅಂತಾರಾಷ್ಟ್ರೀಯ ಮೈದಾನದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಮುಕ್ತಾಯಗೊಂಡ ಮೊದಲ ಟಿ-20 ಪಂದ್ಯದಲ್ಲಿ ಭಾರತ ತಂಡ 21 ರನ್ ಅಂತರದ ಸೋಲು ಕಂಡಿದೆ. 177 ರನ್ಗಳ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 155 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಸೋಲಿನೊಂದಿಗೆ ಭಾರತ ಮೂರು ಪಂದ್ಯಗಳ ಸರಣಿಯಲ್ಲಿ 0-1 ಹಿನ್ನಡೆ ಅನುಭವಿಸಿದೆ.
ಟಾಸ್ ಗೆದ್ದ ಹಾರ್ದಿಕ್ ಪಾಂಡ್ಯ ಮೊದಲು ಫೀಲ್ಡಿಂಗ್ ಮಾಡುವ ನಿರ್ಣಯ ಕೈಗೊಂಡರು. ಮೊದಲು ಬ್ಯಾಟಿಂಗ್ ನಡೆಸಿದ ನ್ಯೂಜಿಲ್ಯಾಂಡ್ ಡೆವೊನ್ ಕಾನ್ವೆ (52) ಹಾಗೂ ಡೆರಲ್ ಮಿಚೆಲ್(59) ಅವರ ಅರ್ಧಶತಕಗಳ ನೆರವಿನಿಂದ 176 ರನ್ ಪೇರಿಸಿತು. ಕಿವೀಸ್ ಪರ ಫಿನ್ ಅಲೆನ್ (35), ಗ್ಲೇನ್ ಫಿಲ್ಲಿಪ್ಸ್ 17 ರನ್ ಬಾರಿಸಿದರು. ಇನ್ನು ಟೀಂ ಇಂಡಿಯಾ ಪರ ವಾಷಿಂಗ್ಟನ್ ಸುಂದರ್ ಎರಡು ವಿಕೆಟ್ ಕಬಳಿಸಿದ್ರೆ, ಅರ್ಷದೀಪ್ ಸಿಂಗ್, ಕುಲದೀಪ್ ಯಾದವ್, ಶಿವಂ ತಲಾ ಒಂದು ವಿಕೆಟ್ ಪಡೆದರು.
ಆರಂಭಿಕ ಆಘಾತ: ಬಳಿಕ 177 ರನ್ ಬೆನ್ನಟ್ಟಿದ ಟೀಂ ಇಂಡಿಯಾ ಆರಂಭದಲ್ಲೇ ವಿಕೆಟ್ ಕಳೆದುಕೊಳ್ಳುತ್ತ ಸಾಗಿತು. ಶುಭಮನ್ ಗಿಲ್ 7 ರನ್, ಇಶಾನ್ ಕಿಶನ್ 4, ರಾಹುಲ್ ತ್ರಿಪಾಠಿ ಶೂನ್ಯಕ್ಕೆ ಔಟಾಗುವ ಮೂಲಕ ಭಾರತ ತಂಡ 15 ರನ್ಗೆ ಪ್ರಮುಖ ಮೂರು ವಿಕೆಟ್ ಕಳೆದುಕೊಂಡು ಒತ್ತಡಕ್ಕೆ ಸಿಲುಕಿತು. ಬಳಿಕ ನಾಯಕ ಹಾರ್ದಿಕ್ ಪಾಂಡ್ಯ (21) ಹಾಗೂ ಸೂರ್ಯಕುಮಾರ್ ಯಾದವ್(47) ಜೊತೆಯಾಟದ ಮೂಲಕ ಭರವಸೆ ಮೂಡಿಸಿದರೂ ಸಹ ಅಲ್ಪ ಸಮಯದಲ್ಲೇ ಇಬ್ಬರೂ ಪೆವಿಲಿಯನ್ ಸೇರಿದ್ದರಿಂದ ಗೆಲುವಿನ ಆಸೆ ಕಮರಿತು.
ನಂತರ ಬಂದ ದೀಪಕ್ ಹೂಡಾ 10 ರನ್ಗೆ ಔಟಾಗುವ ಮೂಲಕ ನಿರಾಸೆ ಮೂಡಿಸಿದರು. ಆಲ್ರೌಂಡರ್ ವಾಷಿಂಗ್ಟನ್ ಸುಂದರ್ 28 ಎಸೆತಗಳಲ್ಲಿ 50 ರನ್ ಬಾರಿಸಿದರೂ ಸಹ ತಂಡವನ್ನು ಗೆಲುವಿನ ದಡ ಸೇರಿಸಲಾಗಲಿಲ್ಲ. ಅಂತಿಮವಾಗಿ ಟೀಂ ಇಂಡಿಯಾ 20 ಓವರ್ಗಳಲ್ಲಿ 9 ವಿಕೆಟ್ಗೆ 155 ರನ್ ಗಳಿಸಿ 21 ರನ್ ಅಂತರದ ಸೋಲುಂಡಿದೆ. ಕಿವೀಸ್ ಪರ ಮೈಕಲ್ ಬ್ರೇಸ್‌ವೆಲ್, ಮಿಚೆಲ್ ಸ್ಯಾಂಟನರ್, ಲಾಕಿ ಫರ್ಗ್ಯುಸನ್ ತಲಾ ಎರಡು ವಿಕೆಟ್ ಕಬಳಿಸಿದ್ರೆ, ಇಶ್ ಸೋಧಿ, ಜೇಕಬ್ ಡಫ್ಫಿ ತಲಾ ಒಂದು ವಿಕೆಟ್ ಕಿತ್ತು ಭಾರತ ತಂಡವನ್ನು ಕಟ್ಟಿ ಹಾಕುವಲ್ಲಿ ಯಶಸ್ವಿಯಾದರು. ಸರಣಿಯ ಎರಡನೇ ಪಂದ್ಯ ಜನವರಿ 29ರಂದು ಲಖನೌನಲ್ಲಿ ನಡೆಯಲಿದೆ.