ವೆಲ್ಲಿಂಗ್ಟನ್ (ನ್ಯೂಜಿಲೆಂಡ್):ನ್ಯೂಜಿಲ್ಯಾಂಡ್ ತಂಡದ ಆಲ್‌ರೌಂಡರ್ ಕಾಲಿನ್ ಡಿ ಗ್ರ್ಯಾಂಡ್‌ಹೋಮ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. 36ರ ಹರೆಯದ ಗ್ರ್ಯಾಂಡ್‌ಹೋಮ್ ನ್ಯೂಜಿಲ್ಯಾಂಡ್ ತಂಡದ ಪ್ರಮುಖ ಆಲ್‌ರೌಂಡರ್ ಆಗಿ ಗುರುತಿಸಿಕೊಂಡಿದ್ದರು. ತಂಡದಲ್ಲಿ ಹೆಚ್ಚಿದ ಸ್ಪರ್ಧೆ ಮತ್ತು ಗಾಯದ ಕಾರಣ ಪದೆ ಪದೇ ತಂಡದಿಂದ ಹೊರಗುಳಿಯುತ್ತಿದ್ದ ಕಾರಣ ಕ್ರಿಕೆಟ್ ಬದುಕಿಗೆ ಪೂರ್ಣ ವಿರಾಮ ಹಾಕಿದ್ದಾರೆ.
2012 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಕಾಲಿನ್ ಡಿ ಗ್ರ್ಯಾಂಡ್‌ಹೋಮ್ ಬ್ಲ್ಯಾಕ್ಕ್ಯಾಪ್ಸ್ ಪರವಾಗಿ 29 ಟೆಸ್ಟ್ ಪಂದ್ಯಗಳಲ್ಲಿ ಆಡಿದ್ದಾರೆ. 38.70 ಸರಾಸರಿಯಲ್ಲಿ 1432 ರನ್ ಗಳಿಸಿದರೆ, 49 ವಿಕೆಟ್‌ಗಳನ್ನು ಕಿತ್ತಿದ್ದಾರೆ. ಟೆಸ್ಟ್ ತಂಡದ ಭಾಗವಾಗಿದ್ದಾಗ 18 ಪಂದ್ಯಗಳಲ್ಲಿ ಗೆಲುವು ಕಂಡಿದ್ದಾರೆ. ಚೊಚ್ಚಲ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಇನ್ನು ಏಕದಿನ ಫಾರ್ಮೆಟ್ನಲ್ಲಿ 45 ಪಂದ್ಯಗಳನ್ನಾಡಿದ್ದು, 742 ರನ್‌ಗಳನ್ನಷ್ಟೇ ಮಾಡಿದ್ದಾರೆ. ಜೊತೆಗೆ 30 ವಿಕೆಟ್‌ಗಳನ್ನು ಪಡೆದಿದ್ದಾರೆ. 2019 ರ ಐಸಿಸಿ ಕ್ರಿಕೆಟ್ ವಿಶ್ವಕಪ್ನ ತಂಡದ ಭಾಗವಾಗಿದ್ದರು. ಟಿ-20 ಚುಟುಕು ಕ್ರಿಕೆಟ್ನಲ್ಲಿ 41 ಪಂದ್ಯಗಳಾಡಿದ್ದು, 505 ರನ್, 12 ವಿಕೆಟ್‌ಗಳನ್ನು ಸಂಪಾದಿಸಿದ್ದಾರೆ.