ಮುಂಬೈ: ಆಸ್ಟ್ರೇಲಿಯಾ ವಿರುದ್ಧದ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ 2023 ಕ್ಕೆ ಮುನ್ನ ಟೀಂ ಇಂಡಿಯಾದ ಹೊಸ ಜೆರ್ಸಿಯ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಭಾರತೀಯ ಕ್ರಿಕೆಟ್ ತಂಡದ ಹೊಸ ಕಿಟ್ ಪ್ರಾಯೋಜಕ ಅಡಿಡಾಸ್ ಸಂಸ್ಥೆ ಹೊಸ ಜೆರ್ಸಿಗಳನ್ನು ವಿನ್ಯಾಸಗೊಳಿಸಿದ್ದು, ಗುರುವಾರ ವಿಶಿಷ್ಟ ವಿಡಿಯೋ ಮೂಲಕ ಬಿಡುಗಡೆ ಮಾಡಿತು. ಜೂನ್ 7 ರಿಂದ ಇಂಗ್ಲೆಂಡ್‌ನ ಓವಲ್ ಸ್ಟೇಡಿಯಂನಲ್ಲಿ ನಡೆಯಲಿರುವ ಫೈನಲ್‌ನಲ್ಲಿ ಟೀಂ ಇಂಡಿಯಾ ಆಟಗಾರರು ಈ ಹೊಸ ಜೆರ್ಸಿಗಳನ್ನು ಧರಿಸಿ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದ್ದಾರೆ. ಹೊಸ ಜೆರ್ಸಿಯ ಭುಜದ ಮೇಲಿರುವ ಮೂರು ಸಾಲುಗಳು ಅಡಿಡಾಸ್‌ನ ಪ್ರಸಿದ್ಧ ಮೂರು-ಪಟ್ಟಿಗಳ ಲೋಗೋವನ್ನು ಪ್ರತಿನಿಧಿಸುತ್ತವೆ.
ಮೂರು ಫಾರ್ಮ್ಯಾಟ್‌ಗಳಿಗೂ ವಿಭಿನ್ನ ಜರ್ಸಿಗಳು: ಅಡಿಡಾಸ್ ಸಂಸ್ಥೆಯು ಟೀಂ ಇಂಡಿಯಾದ ನ್ಯೂ ಜೆರ್ಸಿಯನ್ನು ಪರಿಚಯಿಸಿದ ತಕ್ಷಣ ಮತ್ತೊಂದು ದೊಡ್ಡ ಸಂಗತಿಯನ್ನೂ ರಿವೀಲ್ ಮಾಡಿದೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ಕ್ರಿಕೆಟ್ ತಂಡ ಕ್ರಿಕೆಟ್‌ನ ಎಲ್ಲ ಮೂರು ಮಾದರಿಗಳಲ್ಲಿ ವಿಭಿನ್ನ ಜೆರ್ಸಿಗಳನ್ನು ಧರಿಸಿ ಆಡಲಿದೆ. ತಂಡವು ಮೊದಲು ಎರಡು ರೀತಿಯ ಜೆರ್ಸಿಗಳನ್ನು ಹೊಂದಿತ್ತು. ಟೆಸ್ಟ್ ಕ್ರಿಕೆಟ್‌ನಲ್ಲಿ ಬಿಳಿ ಜೆರ್ಸಿಗಳನ್ನು ಧರಿಸಲಾಗುತ್ತಿತ್ತು. ಅದೇ ವಿನ್ಯಾಸದ ನೀಲಿ ಜೆರ್ಸಿಗಳನ್ನು ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಧರಿಸಲಾಗುತ್ತಿತ್ತು. ಅಂದರೆ ODI ಮತ್ತು T20ಗಳಲ್ಲಿ ಧರಿಸಲಾಗುತ್ತಿತ್ತು. ಆದರೆ ಈ ಬಾರಿ ODI ಮತ್ತು T20 ಗಳಿಗೂ ವಿವಿಧ ರೀತಿಯ ಜೆರ್ಸಿಗಳನ್ನು ಸಿದ್ಧಪಡಿಸಲಾಗಿದೆ.