ಮುಂಬೈ :ರೋಹಿತ್ ಶರ್ಮಾ ಹ್ಯಾಮ್ಸ್ಟ್ರಿಂಗ್ ಗಾಯದ ಕಾರಣ ಸೋಮವಾರ ಟೆಸ್ಟ್ ಸರಣಿಯಿಂದ ಹೊರ ಬರುತ್ತಿದ್ದಂತೆ ಕ್ರಿಕೆಟ್ ಅಭಿಮಾನಿಗಳು ಭಾರತ ತಂಡದಲ್ಲಿ ಬಿರುಕು ಕಾಣಿಸಿರಬಹುದು ಎಂದು ಅನುಮಾನುಸಿತ್ತಿದ್ದಾರೆ.
ಇದೀಗ ಕೊಹ್ಲಿ ತಾವೂ ಏಕದಿನ ಸರಣಿಯಿಂದ ವಿಶ್ರಾಂತಿ ಬಯಸಿರುವುದಾಗಿ ಬಿಸಿಸಿಐ ಬಳಿ ಹೇಳಿರುವುದರಿಂದ ಆ ಅನುಮಾನಕ್ಕೆ ಮತ್ತಷ್ಟು ಪುಷ್ಠಿ ನೀಡುತ್ತಿದೆ. ಈಗಾಗಲೇ ಕೊಹ್ಲಿ ಮುಂಬೈನಲ್ಲಿ ಭಾರತೀಯ ಕ್ರಿಕೆಟಿಗರಿಗೆ ಆಯೋಜಿಸಿದ್ದ ಮೂರು ದಿನಗಳ ಅಭ್ಯಾಸ ಶಿಬಿರಕ್ಕೆ ಹಾಜಾರಾಗಿರಲಿಲ್ಲ. ಅಧಿಕಾರಿಗಳು ಕರೆ ಮಾಡಿದರೂ ಸ್ವೀಕರಿಸಿರಲಿಲ್ಲ ಎಂದು ತಿಳಿದು ಬಂದಿತ್ತು.
ಇದೀಗ ರೋಹಿತ್ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೆ ಅಲಭ್ಯರಾಗುತ್ತಿದ್ದಂತೆ ಕೊಹ್ಲಿ ತಮ್ಮ ಮಗಳಾದ ವಮಿಕಾಳ ಮೊದಲ ಬರ್ತ್‌ಡೇಯನ್ನು ಪತ್ನಿ ಅನುಷ್ಕಾ ಶರ್ಮಾ ಜೊತೆಗೆ ಆಚರಿಸಿಕೊಳ್ಳಬೇಕೆಂಬ ಕಾರಣ ನೀಡಿ ಏಕದಿನ ಸರಣಿಗೆ ತಾವೂ ಲಭ್ಯರಾಗುವುದಿಲ್ಲ ಎಂದು ಆಯ್ಕೆ ಸಮಿತಿಗೆ ಹೇಳಿದ್ದಾರೆ ಎಂದು ಬಿಸಿಸಿಐ ಮೂಲಗಳಿಂದ ತಿಳಿದು ಬಂದಿದೆ.
ಇದನ್ನೂ ಓದಿ:ವಿಶ್ರಾಂತಿ ನೀಡುವಂತೆ ಬಿಸಿಸಿಗೆ ವಿರಾಟ್ ಮನವಿ; ದ.ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಕೊಹ್ಲಿ ಅಲಭ್ಯ!
ಭಾರತ ತಂಡದ ನಾಯಕರಾದ ಈ ಇಬ್ಬರು ಕೇವಲ ತಾವೂ ನಾಯಕರಾಗಿಲ್ಲದ ಮಾದರಿಯ ಸರಣಿಯಿಂದ ಹೊರ ಬಂದಿದ್ದಾರೆ. ಈ ಕಾರಣದಿಂದಲೇ ನಾಯಕತ್ವ ವಿಭಜನೆಯಿಂದ ಟೀಂ ಇಂಡಿಯಾದಲ್ಲಿ ದೊಡ್ಡ ಬಿರುಕು ಕಂಡು ಬಂದಿದೆ ಎನ್ನಲಾಗುತ್ತಿದೆ.
ಭಾರತದಲ್ಲಿ ಬಿರುಕು ಕಾಣಿಸಿಕೊಳ್ಳುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಭಾರತ ಕ್ರಿಕೆಟ್ ಇತಿಹಾಸದಲ್ಲಿ ಇಂತಹ ಘಟನೆಗಳು ನಡೆದಿವೆ. ದಂತಕತೆಗಳಾದ ಸುನಿಲ್ ಗವಾಸ್ಕರ್-ಕಪಿಲ್ ದೇವ್, ಸಚಿನ್ ತೆಂಡೂಲ್ಕರ್-ರಾಹುಲ್ ದ್ರಾವಿಡ್, ಸಚಿನ್ ತಂಡೂಲ್ಕರ್- ಮೊಹಮ್ಮದ್ ಅಜರುದ್ದೀನ್, ಸೆಹ್ವಾಗ್-ಧೋನಿ ನಡುವೆಯೂ ಮನಸ್ಥಾಪ ಕಂಡು ಬಂದಿತ್ತು.
ಆದರೆ, ಅಂದು ತಂಡದಿಂದ ಹೊರ ಉಳಿಯುವ ಮಟ್ಟಕ್ಕೆ ಅದು ಬೆಳೆದಿರಲಿಲ್ಲ. ಆದರೆ ಇದೀಗ ಈ ಒಳ ಜಗಳ ಅತಿರೇಕಕ್ಕೆ ತಿರುಗುವಂತೆ ಕಾಣುತ್ತಿತದ್ದು, ಬಿಸಿಸಿಐ ಆದಷ್ಟು ಬೇಗ ಈ ಇಬ್ಬರು ಕ್ರಿಕೆಟಿಗರ ನಡುವಿನ ಬಿರುಕನ್ನು ನಿಯಂತ್ರಿಸಲು ಪ್ರಯತ್ನಿಸಬೇಕೆಂಬುದು ಅಭಿಮಾನಿಗಳ ಆಶಯವಾಗಿದೆ.