ಮುಂಬೈ: ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಬ್ರ್ಯಾಂಡ್ ಮೌಲ್ಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅಂತರರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿಯಾಗಿದ್ದರೂ ಸಹ ಧೋನಿ 33 ಕಂಪನಿಗಳೊಂದಿಗೆ ರಾಯಭಾರತ್ವ ಹೊಂದಿದ್ದು, ಇದರಿಂದ ಅವರು ವಾರ್ಷಿಕವಾಗಿ 150 ಕೋಟಿ ರೂಪಾಯಿ ಗಳಿಸುತ್ತಿದ್ದಾರೆ.
2020 ಆಗಸ್ಟ್ 15ರಂದು ಧೋನಿ ತಮ್ಮ ಅಂತರರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದರು. ಸುಮಾರು 20 ತಿಂಗಳು ಕಳೆದಿದ್ದರೂ ಅವರ ಬ್ರ್ಯಾಂಡ್ ಮೌಲ್ಯ ಕುಸಿಯುವ ಬದಲಾಗಿ ನಿಯಮಿತವಾಗಿ ಏರಿಕೆಯಾಗುತ್ತಿದೆ. 2022ರ ಐಪಿಎಲ್ಗೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ಗೆ 4 ಪ್ರಶಸ್ತಿಯನ್ನು ತಂದುಕೊಟ್ಟಿರುವ ನಾಯಕ ಕೇವಲ 4 ವಾರಗಳ ಅಂತರದಲ್ಲಿ 5 ಹೊಸ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ.
ಧೋನಿ 2022ರ ಐಪಿಎಲ್ ಆವೃತ್ತಿಯ ಆರಂಭಕ್ಕೂ ಮುನ್ನ ವಿನ್ಜೋ(WINZO), ಟರ್ಟೆಲ್ಮಿಂಟ್(ಇನ್ಸುರೆನ್ಸ್ ಕಂಪನಿ) ಗಣೇಶ್ ಹೌಸಿಂಗ್, ಒರಿಯೋ ಮತ್ತು ಕಿನ್ಲೆ ಕಂಪನಿಗಳ ಜೊತೆಗೆ ಹೊಸದಾಗಿ ಒಪ್ಪಂದ ಮಾಡಿಕೊಂಡಿದ್ದಾರೆ. ಈ 5 ಕಂಪನಿಗಳು ಸೇರಿದಂತೆ ಧೋನಿ ಬ್ರ್ಯಾಂಡ್ ಅಂಬಾಸಿಡರ್ ಆಗಿರುವ ಕಂಪನಿಗಳ ಸಂಖ್ಯೆ 33ಕ್ಕೆ ಏರಿಕೆಯಾಗಿದೆ. 40 ವರ್ಷದ ವಿಕೆಟ್ ಕೀಪರ್ ಬ್ಯಾಟರ್ ಬ್ರಾಂಡ್ ಮೌಲ್ಯ $61.2 ಮಿಲಿಯನ್ ಇದ್ದು, 2021ರ ಡಫ್ ಮತ್ತು ಫೆಲ್ಪ್ಸ್ ಸೆಲೆಬ್ರಿಟಿ ಬ್ರಾಂಡ್ ಮೌಲ್ಯಮಾಪನ ಶ್ರೇಯಾಂಕದಲ್ಲಿ 5ನೇ ಸ್ಥಾನದಲ್ಲಿದ್ದಾರೆ.