ದುಬೈ: ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ರ‍್ಯಾಂಕಿಂಗ್‌ನಲ್ಲಿ ಟೀಂ ಇಂಡಿಯಾ ಟೆಸ್ಟ್, ಏಕದಿನ ಮತ್ತು ಟಿ-20 ಸೇರಿ ಮೂರು ಮಾದರಿಯಲ್ಲೂ ನಂಬರ್ ಒನ್ ಪಟ್ಟಕ್ಕೇರಿದೆ. ಟಿ-20ರಲ್ಲಿ 267 ಅಂಕ, ಏಕದಿನದಲ್ಲಿ 114 ಅಂಕ ಮತ್ತು ಟೆಸ್ಟ್ ಕ್ರಿಕೆಟ್ನಲ್ಲಿ 115 ಅಂಕಗಳೊಂದಿಗೆ ಭಾರತ ಅಗ್ರಸ್ಥಾನ ಕೊಂಡೊಯ್ದುಕೊಂಡಿದೆ.
ಬುಧವಾರ ಐಸಿಸಿ ರ‍್ಯಾಂಕಿಂಗ್ ಹೊಸ ಪಟ್ಟಿ ಬಿಡುಗಡೆ ಮಾಡಲಾಗಿದ್ದು, ಟೆಸ್ಟ್ ಶ್ರೇಯಾಂಕದಲ್ಲಿ ಆಸ್ಟ್ರೇಲಿಯಾ ತಂಡವನ್ನು ಹಿಂದಿಕ್ಕಿ ಟೀಂ ಇಂಡಿಯಾ ಮೊದಲ ಸ್ಥಾನಕ್ಕೆ ಏರಿದೆ. ಬಾರ್ಡರ್ ಗವಾಸ್ಕರ್ ಟ್ರೋಫಿಯ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯ ವಿರುದ್ಧದ ಇನ್ನಿಂಗ್ಸ್ ಗೆಲುವು ದಾಖಲಿಸಿದ ನಂತರ ಈ ಬೆಳವಣಿಗೆ ನಡೆದಿದೆ. ಪ್ರಸ್ತುತ ಟೆಸ್ಟ್ನಲ್ಲಿ ಟೀಂ ಇಂಡಿಯಾ 115 ರೇಟಿಂಗ್ ಅಂಕಗಳನ್ನು ಹೊಂದಿದೆ. 111 ಅಂಕಗಳೊಂದಿಗೆ ಆಸ್ಟ್ರೇಲಿಯಾ ಎರಡನೇ ಸ್ಥಾನದಲ್ಲಿದ್ದರೆ, 106 ಅಂಕಗಳನ್ನು ಹೊಂದಿರುವ ಇಂಗ್ಲೆಂಡ್ ಮೂರನೇ ಸ್ಥಾನ ಹಾಗೂ 100 ಅಂಕಗಳೊಂದಿಗೆ ನ್ಯೂಜಿಲೆಂಡ್ ನಾಲ್ಕನೇ ಸ್ಥಾನ ಪಡೆದಿದೆ. ಐದನೇ ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾ 85 ರೇಟಿಂಗ್ ಅಂಕಗಳನ್ನು ಹೊಂದಿದೆ.
ಇದನ್ನೂ ಓದಿ:ಚಾನಲ್ವೊಂದರ ರಹಸ್ಯ ಕಾರ್ಯಾಚರಣೆ: ವಿವಾದದ ಸುಳಿಯಲ್ಲಿ ಚೇತನ್ ಶರ್ಮಾ
ಮತ್ತೊಂದೆಡೆ, ರೋಹಿತ್ ಶರ್ಮಾ ಪಡೆದ ಟೆಸ್ಟ್ ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿ ಮುಂದುವರೆಯಲು ಹಾಗೂ ಜೂನ್‌ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಅರ್ಹತೆ ಪಡೆಯಲು ಫೆಬ್ರವರಿ 17ರಂದು ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯವನ್ನು ಗೆಲ್ಲಬೇಕಾಗಿದೆ. ಇನ್ನು, ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಲಗ್ಗೆ ಇಡಲು ಟೀಂ ಇಂಡಿಯಾ 3-1 ಅಥವಾ 3-0 ಅಂತರದಲ್ಲಿ ಸರಣಿಯನ್ನು ಕೈವಶ ಮಾಡಿಕೊಳ್ಳಬೇಕಾಗಿದೆ.