ಬೆಂಗಳೂರು:ಮಹಾರಾಜ ಟ್ರೋಫಿ ಕ್ರಿಕೆಟ್ ಟೂರ್ನಿಯ ಇಂದಿನ ಪಂದ್ಯದಲ್ಲಿ ಮಳೆಯಿಂದ ಕಠಿಣ ಗುರಿ ಎದುರಿಸಿದ ಮೈಸೂರು ವಾರಿಯರ್ಸ್ ತಂಡ ಶ್ರೇಯಸ್ ಗೋಪಾಲ್ ಅವರ ಆಲ್ರೌಂಡರ್ ಆಟದ ನಡುವೆಯೂ ಗುಲ್ಬರ್ಗ ಮಿಸ್ಟಿಕ್ಸ್ ವಿರುದ್ಧ 7 ರನ್‌ಗಳ ವೀರೋಚಿತ ಸೋಲು ಅನುಭವಿಸಿದೆ. ಉತ್ತಮ ಬೌಲಿಂಗ್ ಪ್ರದರ್ಶಿಸಿದ ಮನೀಶ್ ಪಾಂಡೆ ಪಡೆ ಜಯದೊಂದಿಗೆ ಅಂಕಪಟ್ಟಿಯಲ್ಲಿ ಮೇಲುಗೈ ಸಾಧಿಸಿದೆ.
ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಮಹಾರಾಜ ಟ್ರೋಫಿ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ 11 ಓವರ್‌ಗಳಲ್ಲಿ 110 ರನ್ ಗಳಿಸಬೇಕಾಗಿದ್ದ ಮೈಸೂರು ವಾರಿಯರ್ಸ್ 102 ರನ್ ಗಳಿಸಿ ಸೋಲು ಕಂಡಿದೆ. ಗುಲ್ವರ್ಗ ಮಿಸ್ಟಿಕ್ಸ್ 17.3 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 148 ರನ್ ಗಳಿಸಿತ್ತು. ಈ ವೇಳೆ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿತು.
ಹೀಗಾಗಿ ಮೈಸೂರು ವಾರಿಯರ್ಸ್ ತಂಡಕ್ಕೆ 11 ಓವರ್‌ಗಳಲ್ಲಿ 110 ರನ್ ಜಯದ ಗುರಿ ನೀಡಲಾಯಿತು. ಬೌಲಿಂಗ್‌ನಲ್ಲಿ ಮಿಂಚಿದ್ದ ಶ್ರೇಯಸ್ ಗೋಪಾಲ್, ಬ್ಯಾಟಿಂಗ್‌ನಲ್ಲಿ 32 ರನ್ ಸಿಡಿಸಿದರೂ ಜಯ ದಕ್ಕಲಿಲ್ಲ. ಟೂರ್ನಿಯ ಪ್ರತಿ ಪಂದ್ಯದಲ್ಲೂ ಮಿಂಚುತ್ತಿದ್ದ ಪವನ್ ದೇಶಪಾಂಡೆ ಇಂದೂ ಕೂಡ 25 ರನ್ ಗಳಿಸಿದರು. ಭರತ್ ಧುರಿ 7 ರನ್ ಗಳಿಸಲು 8 ಎಸೆತ ಎದುರಿಸಬೇಕಾಯಿತು. ಅಂತಿಮವಾಗಿ ಮೈಸೂರು ವಾರಿಯರ್ಸ್ 7 ವಿಕೆಟ್ ನಷ್ಟಕ್ಕೆ 102 ರನ್ ಗಳಿಸಲಷ್ಟೇ ಶಕ್ತವಾಯಿತು.