ಮುಂಬೈ:ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಇದೇ ಮೊದಲ ಸಲ ಸ್ಪರ್ಧಿಯಾಗಿರುವ ಲಖನೌ ಸೂಪರ್ ಜೈಂಟ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರೋಚಕ ಜಯ ಸಾಧಿಸಿತು. ಈ ಮೂಲಕ ಐಪಿಎಲ್ ಆವೃತ್ತಿಯಲ್ಲಿ ಚೊಚ್ಚಲ ಗೆಲುವಿನ ನಗೆ ಬೀರಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಸಿಎಸ್ಕೆ ನೀಡಿದ ಬೃಹತ್ 211ರನ್‌ಗಳ ಗುರಿ ಬೆನ್ನತ್ತಿದ ಲಖನೌ, ಯುವ ಪ್ಲೇಯರ್ ಬದೌನಿ ಆಕರ್ಷಕ ಆಟದಿಂದ ಗೆಲುವಿನ ಗಡಿ ತಲುಪಿತು.
ಮುಂಬೈನ ಬ್ರಬೌರ್ನ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಚೆನ್ನೈ ಸೂಪರ್ ಕಿಂಗ್ಸ್ ಆರಂಭಿಕರಾದ ರಾಬಿನ್ ಉತ್ತಪ್ಪ(50) ಹಾಗೂ ಮಧ್ಯಮ ಕ್ರಮಾಂಕದ ಶಿವಂ ದುಬೆ(49)ರನ್‌ಗಳ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ ಏಳು ವಿಕೆಟ್ ಕಳೆದುಕೊಂಡು 210ರನ್ಗಳಿಕೆ ಮಾಡಿತು. ಮಧ್ಯಮ ಕ್ರಮಾಂಕದಲ್ಲಿ ಮೊಯಿನ್ ಅಲಿ 35ರನ್, ಅಂಬಾಟಿ ರಾಯಡು 27ರನ್, ಜಡೇಜಾ 17, ಧೋನಿ ಅಜೇಯ 16ರನ್ಗಳಿಕೆ ಮಾಡಿ ತಂಡದ ಮೊತ್ತ ಹೆಚ್ಚಿಸುವಲ್ಲಿ ಯಶಸ್ವಿಯಾದರು. ತಂಡದ ಪರ ಆವೇಶ್ ಖಾನ್, ರವಿ ಬಿಷ್ಣೋಯ್ ಹಾಗೂ ಆಂಡ್ರ್ಯೂ ಟೈ ತಲಾ 2ವಿಕೆಟ್ ಪಡೆದುಕೊಂಡರು.
ಸ್ಪೋಟಕ ಆಟ ಪ್ರದರ್ಶಿಸಿದ ಲಿವಿಸ್
211ರನ್‌ಗಳ ಗುರಿ ಬೆನ್ನತ್ತಿದ ಲಖನೌ ಸೂಪರ್ ಜೈಂಟ್ಸ್ ಮೊದಲ ಓವರ್ನಿಂದಲೂ ಸ್ಫೋಟಕ ಆರಂಭ ಪಡೆದುಕೊಂಡಿತು. ಆರಂಭಿಕರಾಗಿ ಕಣಕ್ಕಿಳಿದ ನಾಯಕ ಕೆ.ಎಲ್.ರಾಹುಲ್, ಕ್ವಿಂಟನ್ ಡಿಕಾಕ್ ಜೋಡಿ ಮೊದಲ ವಿಕೆಟ್ ನಷ್ಟಕ್ಕೆ 99ರನ್‌ಗಳ ಜೊತೆಯಾಟ ನೀಡಿದರು. 40ರನ್ಗಳಿಕೆ ಮಾಡಿದ್ದ ರಾಹುಲ್ ಅವರು ಪ್ರಿಟೋರಿಯಸ್ ಓವರ್ನಲ್ಲಿ ದೊಡ್ಡ ಹೊಡೆತಕ್ಕೆ ಮುಂದಾಗಿ ಕ್ಯಾಚಿತ್ತರು. ಇದರ ಬೆನ್ನಲ್ಲೇ ಕ್ರೀಸಿಗೆ ಬಂದ ಕನ್ನಡಿಗ ಮನೀಷ್ ಪಾಂಡೆ ಕೂಡ 5ರನ್ಗಳಿಕೆ ಮಾಡಿ ಮತ್ತೊಮ್ಮೆ ನಿರಾಸೆ ಮೂಡಿಸಿದರು.
ಉತ್ತಮ ಜೊತೆಯಾಟ ನೀಡಿದ ಡಿಕಾಕ್, ರಾಹುಲ್
ಲಿವಿಸ್, ಬದೌನಿ ಸ್ಫೋಟಕ ಬ್ಯಾಟಿಂಗ್: 61ರನ್ಗಳಿಕೆ ಮಾಡಿದ್ದ ಕ್ವಿಂಟನ್ ಡಿಕಾಕ್ ವಿಕೆಟ್ ಕಳೆದುಕೊಳ್ಳುತ್ತಿದ್ದಂತೆ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಇವಿನ್ ಲಿವಿಸ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದರು. ತಾವು ಎದುರಿಸಿದ 23 ಎಸೆತಗಳಲ್ಲಿ 3 ಸಿಕ್ಸರ್, 6 ಬೌಂಡರಿ ಸೇರಿ 55ರನ್ಗಳಿಕೆ ಮಾಡಿ ಅಜೇಯರಾಗಿ ಉಳಿದರು. ತಂಡದ ಗೆಲುವಿಗೆ 24 ಎಸೆತಗಳಲ್ಲಿ 55ರನ್‌ಗಳ ಅಗತ್ಯವಿದ್ದ ಸಂದರ್ಭದಲ್ಲಿ ಬ್ರಾವೋ ಓವರ್ನಲ್ಲಿ 13ರನ್ಗಳಿಕೆ ಮಾಡಿದ್ದ ದೀಪಕ್ ಹೂಡಾ ವಿಕೆಟ್ ಒಪ್ಪಿಸಿದರು.
ಈ ವೇಳೆ ಮೈದಾನಕ್ಕಿಳಿದ ಬದೌನಿ ತಾವು ಎದುರಿಸಿದ ಮೊದಲ ಎಸೆತದಲ್ಲೇ ಸಿಕ್ಸರ್ ಸಿಡಿಸಿದರು. ಎದುರಿಸಿದ 9 ಎಸೆತಗಳಲ್ಲಿ ಎರಡು ಸಿಕ್ಸರ್ ಸೇರಿದಂತೆ 19ರನ್ಗಳಿಕೆ ಮಾಡಿ, ತಂಡಕ್ಕೆ ರೋಚಕ ಗೆಲುವು ತಂದಿಟ್ಟರು. ಲಖನೌ ತಂಡ 19.3 ಎಸೆತಗಳಲ್ಲಿ ಕೇವಲ 4 ವಿಕೆಟ್ ಕಳೆದುಕೊಂಡು 211ರನ್ಗಳಿಕೆ ಮಾಡಿ ಐಪಿಎಲ್ ಆವೃತ್ತಿಯಲ್ಲಿ ಮೊದಲ ಗೆಲುವು ದಾಖಲು ಮಾಡಿದೆ. ಚೆನ್ನೈ ತಂಡದ ಪರ ಪ್ರಿಟೋರಿಯಸ್ 2 ವಿಕೆಟ್, ತುಷಾರ್ ದೇಶಪಾಂಡೆ ಹಾಗೂ ಬ್ರಾವೋ ತಲಾ 1 ವಿಕೆಟ್ ಪಡೆದುಕೊಂಡರು.
ಡ್ವೇನ್ ಬ್ರಾವೋ ದಾಖಲೆ:ನಿನ್ನೆಯ ಪಂದ್ಯದಲ್ಲಿ ದೀಪಕ್ ಹೂಡಾ ವಿಕೆಟ್ ಪಡೆಯುವ ಮೂಲಕ ಡ್ವೇನ್ ಬ್ರಾವೋ ಹೊಸ ದಾಖಲೆ ಬರೆದರು. ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿರುವ ಬ್ರಾವೋ, 170 ವಿಕೆಟ್ ಕಬಳಿಸಿದ ಮಾಲಿಂಗ ಅವರನ್ನು ಹಿಂದಿಕ್ಕಿದ್ದು, 171 ವಿಕೆಟ್ ಪಡೆದುಕೊಂಡಿದ್ದಾರೆ.
ಚೆನ್ನೈಗೆ ಐತಿಹಾಸಿಕ ಸೋಲು:ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲೇ ಇದೇ ಮೊದಲ ಸಲ ಸೀಸನ್ ಆರಂಭದ ಎರಡೂ ಪಂದ್ಯಗಳಲ್ಲಿ ಸೋತಿರುವ ಕಳಪೆ ದಾಖಲೆ ಚೆನ್ನೈ ಸೂಪರ್ ಕಿಂಗ್ಸ್ ಪಾಲಾಗಿದೆ.