ಲೀಡ್ಸ್ :ಭಾರತ ತಂಡದ ಅನುಭವಿ ಸ್ಪಿನ್ನರ್ ಮತ್ತು ವಿಶ್ವದ 2ನೇ ಶ್ರೇಯಾಂಕದ ಬೌಲರ್ ಆಗಿರುವ ರವಿಚಂದ್ರನ್ ಆಶ್ವಿನ್ ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿಯುವ ಸಾಧ್ಯತೆಯಿದೆ ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸುಳಿವು ನೀಡಿದ್ದಾರೆ.
ಇಂಗ್ಲೆಂಡ್ ಪ್ರವಾಸದಲ್ಲಿ ಅಶ್ವಿನ್ಗೆ ಇನ್ನೂ ಒಂದು ಅವಕಾಶವನ್ನು ನೀಡಿಲ್ಲ. ಮೊದಲೆರಡು ಟೆಸ್ಟ್ ಪಂದ್ಯಗಳಲ್ಲಿ 4 ವೇಗಿಗಳ ಜೊತೆಗೆ ಒಬ್ಬ ಸ್ಪಿನ್ನರ್ ಮಾತ್ರ ಆಡಿದ್ದಾರೆ. ಹಾಗಾಗಿ, ಅನುಭವಿ ಅಶ್ವಿನ್ರನ್ನು ತಂಡದಿಂದ ಕೈಬಿಟ್ಟಿರುವುದು ಚರ್ಚೆಗೆ ಎಡೆ ಮಾಡಿಕೊಟ್ಟಿದೆ. 3ನೇ ಟೆಸ್ಟ್ ಪಂದ್ಯದಲ್ಲಿ ತಂಡದ ಸಂಯೋಜನೆಯ ಗುಟ್ಟನ್ನು ಬಿಟ್ಟುಕೊಡದ ಕೊಹ್ಲಿ, ಪಿಚ್ ಪರಿಶೀಲಿಸಿ ತಂಡದ ಅನುಕೂಲಕ್ಕೆ ಅಗತ್ಯವಾದರೆ ಅಶ್ವಿನ್ಗೆ ಅವಕಾಶ ಸಿಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.
ಇಂಗ್ಲೆಂಡ್ ಕ್ರಿಕೆಟ್ ಸಾಮಾನ್ಯವಾಗಿ ಗ್ರೀನ್ ಟಾಪ್ ಪಿಚ್, ಇಲ್ಲವಾದರೆ ವೇಗಿಗಳಿಗೆ ನೆರವು ನೀಡುವ ಹುಲ್ಲಿನ ಪಿಚ್ ಅನ್ನು ಸಿದ್ಧಪಿಡಿಸುವುದನ್ನು ನಿರೀಕ್ಷಿಸಬಹುದು. ಆದರೆ, ಪ್ರಸ್ತುತ ಪಿಚ್ನಲ್ಲಿ ಹುಲ್ಲಿನ ಕೊರತೆ ಕಾಣುತ್ತಿದೆ. ಹಾಗಾಗಿ, ಪ್ರಮುಖ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಪ್ಲೇಯಿಂಗ್ ಇಲೆವೆನ್ಗೆ ಮರಳಬಹುದು ಎಂದು ಎಲ್ಲರ ನಿರೀಕ್ಷೆಯಾಗಿದೆ.
ನಮಗೆ ಪಿಚ್ ನೋಡಿ ಆಶ್ಚರ್ಯವಾಗಿದೆ. ಅಲ್ಲಿ ಮೇಲ್ಮೈನಲ್ಲಿ ಬಹಳಷ್ಟು ಹುಲ್ಲಿನ ಕೊರತೆಯಿರುವುದನ್ನು ಕಾಣಬಹುದು. ಪ್ರಾಮಾಣಿಕವಾಗಿ ನಾವು ಅದನ್ನು ನಿರೀಕ್ಷಿಸಿರಲಿಲ್ಲ. ಹುಲ್ಲು ಹೆಚ್ಚಿರುತ್ತದೆ ಎಂದು ಭಾವಿಸಿದ್ದೆವು. ಆದರೆ, ಅದು ನಾವಂದುಕೊಂಡ ಹಾಗಿಲ್ಲ. ಆದ್ದರಿಂದ ನಾವು ನಾಳಿನ ಪಂದ್ಯಕ್ಕೆ 12 ಆಟಗಾರರ ಪಟ್ಟಿ ಘೋಷಿಸುತ್ತೇವೆ.