ನವದೆಹಲಿ: ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯನ್ನು 2-0 ಅಂತರದಲ್ಲಿ ಗೆದ್ದುಕೊಂಡಿರುವ ಬೆನ್ನಲ್ಲೇ ಭಾರತ ತಂಡದ ಹಂಗಾಮಿ ನಾಯಕ ಕೆಎಲ್ ರಾಹುಲ್ ಕಳಪೆ ಫಾರ್ಮ್ ಬಗ್ಗೆ ವ್ಯಾಪಕವಾಗಿ ಚರ್ಚೆ ಆರಂಭವಾಗಿದೆ. ಬಾಂಗ್ಲಾದೇಶ ವಿರುದ್ಧದ 3 ಏಕದಿನ ಹಾಗೂ ಎರಡು ಟೆಸ್ಟ್ ಪಂದ್ಯಗಳಲ್ಲಿ ಬ್ಯಾಟ್ ನಿಂದ ಮ್ಯಾಜಿಕ್ ತೋರದ ಕೆಎಲ್ ರಾಹುಲ್ ಸಾಮಾಜಿಕ ಜಾಲತಾಣದಲ್ಲಿ ಟೀಕೆಗೆ ಗುರಿಯಾಗಿದ್ದಾರೆ.
ಮುಂಬರುವ ಶ್ರೀಲಂಕಾ ವಿರುದ್ಧದ ಏಕದಿನ ಮತ್ತು ಟಿ-20 ಸರಣಿಯಲ್ಲಿ ಅಥವಾ ಆಸ್ಟ್ರೇಲಿಯಾ ವಿರುದ್ಧದ ನಾಲ್ಕು ಪಂದ್ಯಗಳ ತವರು ಟೆಸ್ಟ್ ಸರಣಿಯಲ್ಲಿ ಆಯ್ಕೆದಾರರು ಕೆಎಲ್ ರಾಹುಲ್ ಅವರನ್ನು ಕೈಬಿಡಬಹುದು ಎಂದು ಉಹಿಸಲಾಗಿದೆ. ತಂಡದಲ್ಲಿ ಆಯ್ಕೆಯಾದ ನಂತರವು ಅವರು ಕೊನೆಯ ಹನ್ನೊಂದರ ಬಳಗದಲ್ಲಿ ಸ್ಥಾನ ಪಡಯುತ್ತಾರೋ ಇಲ್ಲವೋ ಎಂಬುದು ಕಾದು ನೋಡಬೇಕಾಗಿದೆ.
ಕೆಎಲ್ ರಾಹುಲ್ ಬಗ್ಗೆ, ಮಾಜಿ ಕ್ರಿಕೆಟಿಗ ವಾಸಿಂ ಜಾಫರ್ ಬಾಂಗ್ಲಾದೇಶದಲ್ಲಿ ನಡೆದ ಎರಡು ಟೆಸ್ಟ್ ಸರಣಿಯಲ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿದ ನಂತರ ಆಸ್ಟ್ರೇಲಿಯಾ ವಿರುದ್ಧ ಮುಂಬರುವ ನಾಲ್ಕು ಪಂದ್ಯಗಳ ತವರು ಟೆಸ್ಟ್ ಸರಣಿಯಲ್ಲಿ ಭಾರತೀಯ ನಾಯಕ ಕೆಎಲ್ ರಾಹುಲ್ ಅವರನ್ನು ಆಡುವ 11 ಆಟಗಾರರ ಸಂಭಾವ್ಯ ಪಟ್ಟಿಯಿಂದ ಕೈಬಿಡಲಾಗುವುದು ಎಂದು ನಂಬಿದ್ದಾರೆ.
ಬಾಂಗ್ಲಾದೇಶ ವಿರುದ್ಧದ ಎರಡು ಟೆಸ್ಟ್ ಪಂದ್ಯಗಳ ನಾಲ್ಕು ಇನ್ನಿಂಗ್ಸ್‌ಗಳಲ್ಲಿ ರಾಹುಲ್ ಕೇವಲ 22, 23, 10 ಮತ್ತು 2 ರನ್ ಗಳಿಸಲು ಸಾಧ್ಯವಾಯಿತು. ಗಮನಾರ್ಹವಾಗಿ, ಭಾರತದ ಆರಂಭಿಕ ಕೆಎಲ್ ರಾಹುಲ್ 2022 ರಲ್ಲಿ ನಾಲ್ಕು ಟೆಸ್ಟ್‌ಗಳಲ್ಲಿ 17.13 ಸರಾಸರಿಯಲ್ಲಿ ಕೇವಲ 137 ರನ್ ಗಳಿಸಿದ್ದಾರೆ. ಶ್ರೀಲಂಕಾ ವಿರುದ್ಧದ ಸರಣಿಯಲ್ಲೂ ಈ ಸಂಗತಿಯನ್ನು ಕಾಣಬಹುದು ಎಂದು ಕ್ರಿಕೆಟ್ ತಜ್ಞರು ಉಹಿಸಿದ್ದಾರೆ.
ಕುಲ್ದೀಪ್ ಯಾದವ್ಗೆ ಕೋಕ್: ಢಾಕಾ ಟೆಸ್ಟ್‌ನಲ್ಲಿ ಮಿಂಚಿದ ಚೈನಾಮನ್ ಬೌಲರ್ ಕುಲ್ದೀಪ್ ಯಾದವ್ ಅವರನ್ನು ಆಡುವ ಇಲೆವೆನ್ನಿಂದ ಕೈಬಿಡುವ ನಿರ್ಧಾರವನ್ನು ಹಂಗಾಮಿ ನಾಯಕ ಕೆಎಲ್ ರಾಹುಲ್ ಸಮರ್ಥಿಸಿಕೊಂಡಿದ್ದಾರೆ. ಪಂದ್ಯದ ಹಿಂದಿನ ದಿನ ಮತ್ತು ಬೆಳಗ್ಗೆ ಪಿಚ್ ನೋಡಿ ಪರೀಕ್ಷಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು. ಢಾಕಾ ಪಂದ್ಯದಲ್ಲಿ ಕುಲ್ದೀಪ್ ಯಾದವ್ 22 ತಿಂಗಳ ನಂತರ ಟೆಸ್ಟ್ ಪುನರಾಗಮನ ಮಾಡಿದರು ಮತ್ತು ಪಂದ್ಯದ ಶ್ರೇಷ್ಠ ಆಟಗಾರ ಪ್ರಶಸ್ತಿಯನ್ನು ಗೆದ್ದ ನಂತರವೂ ಪಂದ್ಯದಿಂದ ಹೊರಗೆ ಕುಳಿತು ಕೊಳ್ಳಬೇಕಾಯಿತು ಎಂದು ಹೇಳಿದರು.