ಬೆಂಗಳೂರು:ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರಣಜಿ ಟ್ರೋಫಿಯ ಮೂರನೇ ಕ್ವಾರ್ಟರ್ ಫೈನಲ್ನಲ್ಲಿ ಕರ್ನಾಟಕ 281 ರನ್ ಹಾಗು ಇನ್ನಿಂಗ್ಸ್ ಗೆಲುವು ಪಡೆಯಿತು. ಶ್ರೇಯಸ್ ಗೋಪಾಲ್ ಮತ್ತು ವಿಜಯ್‌ಕುಮಾರ್ ವೈಶಾಕ್ ಅವರು ಕಬಳಿಸಿದ ಅಮೂಲ್ಯ ಆರು ವಿಕೆಟ್ಗಳ ನೆರವಿನಿಂದ ಕರ್ನಾಟಕವು ಉತ್ತರಾಖಂಡವನ್ನು 209 ರನ್‌ಗಳಿಗೆ ಆಲೌಟ್ ಮಾಡಿ ಇನ್ನಿಂಗ್ಸ್‌ಸಹಿತ ವಿಜಯೋತ್ಸವ ಆಚರಿಸಿತು. ಈ ಮೂಲಕ ಕರ್ನಾಟಕ ಸೆಮೀಸ್ಗೆ ಅವಕಾಶ ಪಡೆದುಕೊಂಡಿದೆ. ಶ್ರೇಯಸ್ ಗೋಪಾಲ್ ಆಲ್ರೌಂಡ್ ಆಟಕ್ಕೆ ಪಂದ್ಯಶ್ರೇಷ್ಠ ಪ್ರಶಸ್ತಿ ಒಲಿಯಿತು.
ಮೂರನೇ ದಿನವಾದ ನಿನ್ನೆಗೆ ಉತ್ತರಾಖಂಡ 106ಕ್ಕೆ 3 ವಿಕೆಟ್ ನಷ್ಟ ಅನುಭವಿಸಿತ್ತು. ಕರ್ನಾಟಕ 384 ರನ್ಗಳ ಮುನ್ನಡೆ ಕಾಯ್ದುಕೊಂಡಿತ್ತು. ಕರ್ನಾಟಕ ಇಂದಿನ ಆಟ ಆರಂಭಿಸುವ ಮುನ್ನ ಏಳು ವಿಕೆಟ್ ಕಬಳಿಸುವ ಗುರಿಯೊಂದಿಗೆ ಕಣಕ್ಕಿಳಿದಿತ್ತು. ಅದರಂತೆ ಮಾರಕ ದಾಳಿ ಮಾಡಿದ ಅನುಭವಿ ಶ್ರೇಯಸ್ ಗೋಪಾಲ್ ಮತ್ತು ವಿಜಯ್‌ಕುಮಾರ್ ವೈಶಾಕ್ ತಲಾ 3 ವಿಕೆಟ್ ಗಳಿಸಿದರು. ವಿದ್ವತ್ ಕಾವೇರಪ್ಪ ಮತ್ತು ಚೊಚ್ಚಲ ಪಂದ್ಯ ಆಡುತ್ತಿರುವ ಮುರಳೀಧರ ವೆಂಕಟೇಶ್ ತಲಾ ಎರಡು ವಿಕೆಟ್ ಪಡೆದು ಕರ್ನಾಟಕಕ್ಕೆ 281 ರನ್ಗಳ ಗೆಲುವಿಗೆ ಕಾರಣರಾದರು.
ಜನವರಿ 31 ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರಿಡಾಂಗಣದಲ್ಲಿ ಉತ್ತರಾಖಂಡದ ವಿರುದ್ಧ ಟಾಸ್ ಗೆದ್ದ ಮಯಾಂಕ್ ಅಗರ್ವಾಲ್ ಫೀಲ್ಡಿಂಗ್ ಆಯ್ದುಕೊಂಡಿದ್ದರು. ಮೊದಲ ಇನ್ನಿಂಗ್ಸ್ನಲ್ಲಿ ಉತ್ತರಾಖಂಡ 116ಕ್ಕೆ ತನ್ನೆಲ್ಲಾ ವಿಕೆಟ್ಗಳನ್ನು ಕಳೆದುಕೊಂಡಿತು. ಚೊಚ್ಚಲ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಮುರಳೀಧರ ವೆಂಕಟೇಶ್ ಐದು ವಿಕೆಟ್ ಗಳಿಸಿ ಮಿಂಚಿದರು. ಕುನಾಲ್ ಚಂಡೇಲಾ 31, ಅವನೀಶ್ ಸುಧಾ 17, ಆದಿತ್ಯ ತಾರೆ 14 ಮತ್ತು ಅಖಿಲ್ ರಾವತ್ 14 ರನ್ ಗಳಿಸಿದ್ದು ಬಿಟ್ಟರೆ ಬೇರೆ ಎಲ್ಲರೂ ಒಂದಂಕಿಗೆ ವಿಕೆಟ್ ಚೆಲ್ಲಿದರು.