ಟೀಂ ಇಂಡಿಯಾ ಆಟಗಾರ ವೃದ್ಧಿಮಾನ್ ಸಾಹ ಅವರು ನನ್ನ ವಾಟ್ಸಪ್ ಸಂದೇಶಗಳ ಸ್ಕ್ರೀನ್‌ಶಾಟ್‌ಗಳನ್ನು ತಿರುಚಿ, ಗೌರವಕ್ಕೆ ಧಕ್ಕೆ ತಂದಿದ್ದಾರೆ ಎಂದು ಪತ್ರಕರ್ತ ಬೋರಿಯಾ ಮಜುಂದಾರ್ ಆರೋಪಿಸಿದ್ದು, ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಹೇಳಿಕೆ ನೀಡಿದ್ದಾರೆ.
ಫೆಬ್ರವರಿಯಲ್ಲಿ ಶ್ರೀಲಂಕಾ ಸರಣಿಗೆ ಭಾರತೀಯ ಟೆಸ್ಟ್ ತಂಡದಿಂದ ವೃದ್ಧಿಮಾನ್ ಸಾಹ ಅವರನ್ನು ಕೈಬಿಡಲಾಗಿತ್ತು. ಈ ದಿನದಂದು ಕೆಲವೊಂದು ವಾಟ್ಸಪ್ ಸ್ಕ್ರೀನ್‌ಶಾಟ್‌ಗಳನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದ ವೃದ್ಧಿಮಾನ್ ಸಹಾ ಪತ್ರಕರ್ತನೊಬ್ಬನ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಆದರೆ ಪತ್ರಕರ್ತನ ಹೆಸರನ್ನು ಬಹಿರಂಗಪಡಿಸಿರಲಿಲ್ಲ.
ಸ್ಕ್ರೀಟ್ಶಾಟ್ಗಳಲ್ಲಿ ಏನಿತ್ತು?ವೃದ್ಧಿಮಾನ್ ಸಾಹ ಟ್ವಿಟರ್ನಲ್ಲಿ ಹಂಚಿಕೊಂಡ ಸ್ಕ್ರೀನ್ ಶಾಟ್ಗಳಲ್ಲಿ 'ನಾನು ನಿಮ್ಮೊಂದಿಗೆ ಸಂದರ್ಶನ ಮಾಡುತ್ತೇನೆ', 'ಅವರು ಯಾರು ಉತ್ತಮ ವಿಕೆಟ್ ಕೀಪರ್ ಆಗಿರುತ್ತಾರೋ ಅವರನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ನೀವು 11 ಪತ್ರಕರ್ತರನ್ನು ಆಯ್ಕೆ ಮಾಡಿಕೊಳ್ಳಲು ಪ್ರಯತ್ನಿಸಿ, ಆದರೂ ನೀವು ಉತ್ತಮವಾಗಿರುವವರನ್ನು ಆಯ್ಕೆ ಮಾಡಿಕೊಳ್ಳುವುದಿಲ್ಲ. ನಿಮಗೆ ಯಾರು ಒಳ್ಳೆಯದನ್ನು ಬಯಸುತ್ತಾರೋ ಅವರನ್ನು ಆಯ್ಕೆ ಮಾಡಿಕೊಳ್ಳಿ' 'ನೀವು ಕರೆ ಮಾಡಿಲ್ಲ, ನಾನು ನಿಮ್ಮನ್ನು ಸಂದರ್ಶಿಸುವುದಿಲ್ಲ', 'ಇದನ್ನು ನಾನು ನೆನಪಿಸಿಕೊಳ್ಳುತ್ತೇನೆ'. 'ಈ ರೀತಿ ನೀವು ಮಾಡಬಾರದಿತ್ತು' ಎಂದು ಉಲ್ಲೇಖಿಸಲಾಗಿದೆ.
ಈ ಸ್ಕ್ರೀನ್ ಶಾಟ್ಗಳನ್ನು ಪೋಸ್ಟ್ ಮಾಡಿ, ಭಾರತೀಯ ಕ್ರಿಕೆಟ್‌ಗೆ ನನ್ನ ಎಲ್ಲಾ ಕೊಡುಗೆಗಳ ನಂತರ.. 'ಗೌರವಾನ್ವಿತ' ಎಂದು ಕರೆಯಲ್ಪಡುವ ಪತ್ರಕರ್ತರಿಂದ ನಾನು ಎದುರಿಸುವುದು ಇದನ್ನೇ! ಪತ್ರಿಕೋದ್ಯಮ ಎಲ್ಲಿ ಹಂತಕ್ಕೆ ಹೋಗಿದೆ? ಎಂದು ಪ್ರಶ್ನಿಸಿದ್ದರು. ಆದರೂ ವೃದ್ಧಿಮಾನ್ ಸಹಾ ಪತ್ರಕರ್ತನ ಹೆಸರನ್ನು ಬಹಿರಂಗಪಡಿಸಿರಲಿಲ್ಲ.
ಇದನ್ನೂ ಓದಿ:ರಣಜಿ ಟ್ರೋಫಿ: ಪುದುಚೆರಿ ವಿರುದ್ಧ ಇನ್ನಿಂಗ್ಸ್ ಜಯದ ನಿರೀಕ್ಷೆಯಲ್ಲಿ ಕರ್ನಾಟಕ ತಂಡ
ಬಿಸಿಸಿಐ ಈ ವಿಚಾರವನ್ನು ತನಿಖೆಗೆ ನಡೆಸಲು ಮುಂದಾಗಿದ್ದು, ಬಿಸಿಸಿಐ ಮುಂದೆ ಎಲ್ಲಾ ವಿವರಗಳನ್ನು ಹಂಚಿಕೊಂಡ ನಂತರ ಮಾತನಾಡಿದ್ದ ವೃದ್ಧಿಮಾನ್ ಸಾಹ 'ನನಗೆ ತಿಳಿದಿರುವ ಎಲ್ಲವನ್ನೂ ನಾನು ಸಮಿತಿಗೆ ಹೇಳಿದ್ದೇನೆ. ನಾನು ಅವರೊಂದಿಗೆ ಎಲ್ಲಾ ವಿವರಗಳನ್ನು ಹಂಚಿಕೊಂಡಿದ್ದೇನೆ. ನಾನು ಈಗ ನಿಮಗೆ ಹೆಚ್ಚು ಹೇಳಲಾರೆ. ಈ ಬಗ್ಗೆ ಹೊರಗೆ ಮಾತನಾಡಬೇಡಿ ಎಂದು ಬಿಸಿಸಿಐ ನನಗೆ ಸೂಚನೆ ನೀಡಿದೆ ಎಂದು ಹೇಳಿದ್ದರು.
ಬಿಸಿಸಿಐನ ತನಿಖಾ ಸಮಿತಿಯಲ್ಲಿ ಉಪಾಧ್ಯಕ್ಷ ರಾಜೀವ್ ಶುಕ್ಲಾ, ಖಜಾಂಚಿ ಅರುಣ್ ಧುಮಾಲ್ ಮತ್ತು ಐಪಿಎಲ್ ಆಡಳಿತ ಮಂಡಳಿ ಸದಸ್ಯ ಪ್ರಭತೇಜ್ ಭಾಟಿಯಾ ಅವರು ಸದಸ್ಯರಾಗಿದ್ದಾರೆ.
ನನ್ನನ್ನು ಬಲಿಪಶು ಮಾಡಲಾಗಿದೆ: ವೃದ್ಧಿಮಾನ್ ಸಾಹ ಬಿಸಿಸಿಐ ಮುಂದೆ ಎಲ್ಲವನ್ನೂ ಹೇಳಿಕೊಂಡಿದ್ದೇನೆ ಎಂದ ನಂತರ ಟ್ವಿಟರ್ನಲ್ಲಿ ವಿಡಿಯೋ ಪೋಸ್ಟ್ ಮಾಡಿರುವ ಪತ್ರಕರ್ತ ಬೋರಿಯಾ ಮಜುಂದಾರ್ 'ವೃದ್ಧಿಮಾನ್ ಸಾಹ ನನ್ನ ಟ್ವೀಟ್ಗಳಿಂದ ನಿಜಕ್ಕೂ ನೊಂದಿದ್ದರೆ, ಅವರು ನಾನು ಮೆಸೇಜ್ಗಳನ್ನು ಕಳುಹಿಸಿದ ದಿನವೇ (ಫೆಬ್ರವರಿ 13) ಸ್ಕ್ರೀನ್ ಶಾಟ್ಗಳನ್ನು ಟ್ವಿಟರ್ನಲ್ಲಿ ಪೋಸ್ಟ್ ಮಾಡಬಹುದಿತ್ತು. ಆದರೆ ಅವರು ಫೆಬ್ರವರಿ 19ರವರೆಗೆ ಕಾದಿದ್ದು, ಶ್ರೀಲಂಕಾ ಸರಣಿಗೆ ಕೈಬಿಟ್ಟಾಗ ರಾತ್ರಿ 10.12ಕ್ಕೆ ಸ್ಕ್ರೀನ್ ಶಾಟ್ ಹಾಕಿ, ನನ್ನನ್ನು ಬಲಿಪಶು ಮಾಡಲಾಗಿದೆ ಎಂದಿದ್ದಾರೆ.
ಕಥೆಗೆ ಎರಡು ಮುಖಗಳಿರುತ್ತವೆ: ಅದೇ ಟ್ವೀಟ್ನಲ್ಲಿ ಕಥೆಗೆ ಯಾವಾಗಲೂ ಎರಡು ಬದಿಗಳಿರುತ್ತವೆ. ವೃದ್ಧಿಮಾನ್ ಸಾಹ ನನ್ನ ವಾಟ್ಸಪ್ ಚಾಟ್ಗಳ ಸ್ಕ್ರೀನ್ ಚಾಟ್ಗಳನ್ನು ತಿರುಚಿದ್ದಾರೆ. ಇದು ನನ್ನ ಖ್ಯಾತಿ ಮತ್ತು ಗೌರವಕ್ಕೆ ಹಾನಿಮಾಡಿದೆ. ಬಿಸಿಸಿಐ ನ್ಯಾಯಯುತ ವಿಚಾರಣೆ ಮಾಡಬೇಕೆಂದು ನಾನು ಮನವಿ ಮಾಡುತ್ತೇನೆ. ನನ್ನ ವಕೀಲರು ವೃದ್ಧಿಮಾನ್ ಸಹಾ ಮೇಲೆ ಮಾನನಷ್ಟ ಮೊಕದ್ದಮೆ ಹೂಡಲು ಮುಂದಾಗಿದ್ದಾರೆ. ಸತ್ಯಕ್ಕೆ ಜಯವಾಗಲಿ ಎಂದು ಬರೆದುಕೊಂಡಿದ್ದಾರೆ.