ಮುಂಬೈ:ಗುಜರಾತ್ ಟೈಟಾನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಪಂದ್ಯ ಆರೆಂಜ್ ಕ್ಯಾಪ್ ಹಣಾಹಣಿಗೆ ಸಾಕ್ಷಿಯಾಯಿತು. ಹಾರ್ದಿಕ್ ಪಾಂಡ್ಯಾ ಬಿರುಸಿನ 87 ರನ್ ಗಳಿಸುವ ಮೂಲಕ ರನ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದರೆ, 2ನೇ ಸ್ಥಾನಕ್ಕೆ ತಳ್ಳಲ್ಪಟ್ಟ ಜೋಸ್ ಬಟ್ಲರ್ ಮತ್ತೊಂದು ಅರ್ಧಶತಕ ಸಿಡಿಸಿ ಮತ್ತೆ ಆರೆಂಜ್ ಕ್ಯಾಪ್ ಮರಳಿ ಪಡೆದರು.
ಇದಕ್ಕೂ ಮುನ್ನ ಅತಿ ಹೆಚ್ಚು ರನ್ ಗಳಿಸಿ ಆರೆಂಜ್ ಕ್ಯಾಪ್ ತನ್ನದಾಗಿಸಿಕೊಂಡಿದ್ದ ಬಟ್ಲರ್, ಪಂದ್ಯದ ನಡುವೆ ಹಾರ್ದಿಕ್ ಪಾಂಡ್ಯಾ ಅತಿಹೆಚ್ಚು ರನ್ನರ್ ಆಗಿದ್ದಾಗ ಮೈದಾನದಲ್ಲಿಯೇ ಕ್ಯಾಪ್ ತೆಗೆದು ಸೊಂಟಕ್ಕೆ ಸಿಕ್ಕಿಸಿಕೊಂಡರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಬಟ್ಲರ್ ಈ ನಡೆಗೆ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪಂದ್ಯದ 20ನೇ ಓವರ್ನಲ್ಲಿ ಹಾರ್ದಿಕ್ ಪಾಂಡ್ಯಾ 76 ರನ್ ಗಳಿಸಿದ್ದಾಗ ರನ್ ಗಳಿಸಿದವರ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಲಗ್ಗೆ ಇಟ್ಟರು. ಇದನ್ನರಿತ ಜೋಸ್ ಬಟ್ಲರ್ ತಾನು ತೊಟ್ಟಿದ್ದ ಆರೆಂಜ್ ಕ್ಯಾಪ್ ಅನ್ನು ನೆತ್ತಿಯ ಮೇಲಿಂದ ತೆಗೆದು ಸೊಂಟಕ್ಕೆ ಸಿಕ್ಕಿಸಿಕೊಂಡರು. ಪಂದ್ಯದ ಮಧ್ಯೆಯೇ ಕ್ಯಾಮೆರಾಗಳು ಬಟ್ಲರ್ ಅವರ ಈ ನಡೆ ಗುರುತಿಸಿದವು.
ಬಳಿಕ ರಾಜಸ್ತಾನ ರಾಯಲ್ಸ್ ಇನಿಂಗ್ಸ್ನಲ್ಲಿ ಭರ್ಜರಿ ಬ್ಯಾಟ್ ಮಾಡಿದ ಜೋಸ್ ಬಟ್ಲರ್ 54 ರನ್ ಸಿಡಿಸಿ ಮತ್ತೆ ರನ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ. 272 ರನ್ ಗಳಿಸಿದ ಬಟ್ಲರ್ ಮೊದಲಿಗರಾಗಿದ್ದರೆ, ಬಳಿಕ ಹಾರ್ದಿಕ್ ಪಾಂಡ್ಯಾ(228), ಶಿವಂ ದುಬೆ(207), ಶುಭ್ಮನ್ ಗಿಲ್(200), ಶಿಮ್ರಾನ್ ಹೆಟ್ಮಾಯಿರ್(197) ನಂತರದ ಸ್ಥಾನದಲ್ಲಿದ್ದಾರೆ.
ಇದನ್ನೂ ಓದಿ:ಹಾರ್ದಿಕ್ ಅದೃಷ್ಟ ಬದಲಿಸಿದ ಐಪಿಎಲ್ ಕ್ಯಾಪ್ಟನ್ಸಿ.. ಪಾಂಡ್ಯಾ ನಾಯಕತ್ವ ಹೊಗಳಿದ ರಶೀದ್ ಖಾನ್