ನವದೆಹಲಿ: 2007ರಲ್ಲಿ ಭಾರತ ಟಿ20 ಕ್ರಿಕೆಟ್ ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ಜೋಗಿಂದರ್ ಶರ್ಮಾ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಪಾಕಿಸ್ತಾನ ವಿರುದ್ಧದ ಫೈನಲ್ ಪಂದ್ಯದಲ್ಲಿ ಮೋಡಿ ಮಾಡಿದ್ದ ಶರ್ಮಾ ಇಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರಿಗೆ ವಿಸ್ತೃತ ಪತ್ರ ಬರೆದು ನಿವೃತ್ತಿ ನಿರ್ಧಾರ ಘೋಷಿಸಿದ್ದಾರೆ.
ಇದನ್ನೂ ಓದಿ:ಅಂಡರ್ 19 ವನಿತೆಯರ ವಿಶ್ವಕಪ್: ಇಂಡಿಯಾ ಟೀಂನ ಸೌಮ್ಯಾ ತಿವಾರಿಗೆ ತವರಿನಲ್ಲಿ ಅದ್ಧೂರಿ ಸ್ವಾಗತ
ರೋಚಕ ಪಂದ್ಯ: ಪಾಕಿಸ್ತಾನ ವಿರುದ್ಧದ ಫೈನಲ್ ಪಂದ್ಯದ ಕೊನೆಯ ಓವರ್‌ನಲ್ಲಿ ಪಾಕಿಸ್ತಾನದ ಗೆಲುವಿಗೆ 13 ರನ್ ಬೇಕಿತ್ತು. ಈ ಮೊತ್ತ ಬಿಟ್ಟುಕೊಡದ ಶರ್ಮಾ ತಮ್ಮ ಅದ್ಭುತ ಬೌಲಿಂಗ್ ಮೂಲಕ ಭಾರತಕ್ಕೆ ಟಿ20 ವಿಶ್ವಕಪ್ ಉಡುಗೊರೆ ಕೊಟ್ಟಿದ್ದರು. ಬಳಿಕ ಟೀಂ ಇಂಡಿಯಾದಿಂದ ಹೊರಗುಳಿದಿದ್ದ ಅವರು ಮತ್ತೆ ತಂಡದಲ್ಲಿ ಕಾಣಿಸಿಕೊಳ್ಳಲೇ ಇಲ್ಲ.
"ಕೃತಜ್ಞತೆ, ನಮ್ರತೆಯಿಂದ ಎಲ್ಲಾ ರೀತಿಯ ಅಂತಾರಾಷ್ಟ್ರೀಯ ಮತ್ತು ದೇಶೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸುತ್ತಿದ್ದೇನೆ. 2002ರಿಂದ 2017ರವರೆಗಿನ ಪ್ರಯಾಣವು ನನ್ನ ಜೀವನದ ಅತ್ಯಂತ ಅದ್ಭುತ ಕ್ಷಣಗಳಾಗಿದ್ದವು" ಎಂದಿದ್ದಾರೆ. ಪತ್ರದಲ್ಲಿ ಬಿಸಿಸಿಐ, ಹರಿಯಾಣ ಕ್ರಿಕೆಟ್ ಬೋರ್ಡ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್‌ಗೆ ಧನ್ಯವಾದ ತಿಳಿಸಿದ್ದಾರೆ. ತಂಡದ ಸಹ ಆಟಗಾರರು, ಕೋಚ್, ಮೆಂಟರ್, ಸಹಾಯಕ ಸಿಬ್ಬಂದಿ, ನನ್ನ ಕುಟುಂಬ ಸದಸ್ಯರಿಗೆ ಧನ್ಯವಾದ ಎಂದು ವಿದಾಯ ಪತ್ರದಲ್ಲಿ ಬರೆದಿದ್ದಾರೆ.
ಇದನ್ನೂ ಓದಿ:9 ವರ್ಷಗಳ ಬಳಿಕ ಪೋಷಕರನ್ನು ಸೇರಿದ ಕಾಣೆಯಾಗಿದ್ದ ಬಾಲಕ: ಇದು ಫುಟ್ಬಾಲ್ ಮ್ಯಾಜಿಕ್!
ಹರಿಯಾಣದ ರೋಹ್ಟಕ್ ಮೂಲದ ಜೋಗಿಂದರ್ ಶರ್ಮಾ ಭಾರತ ಪರ 2004 ರಿಂದ 2007ರವರೆಗೆ 4 ಏಕದಿನ ಮತ್ತು 4 ಟಿ20 ಪಂದ್ಯಗಳ ಆಡಿದ್ದಾರೆ. ಎರಡೂ ಮಾದರಿಗಳಲ್ಲಿ ಐದು ವಿಕೆಟ್ ಪಡೆದಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಮೊದಲ ನಾಲ್ಕು ಸೀಸನ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಆಡಿದ್ದು 16 ಪಂದ್ಯಗಳಲ್ಲಿ 12 ವಿಕೆಟ್ ಕಬಳಿಸಿದ್ದಾರೆ. ತಮ್ಮ ಕ್ರಿಕೆಟ್ ವೃತ್ತಿಜೀವನದ ಎಲ್ಲಾ T20 ಪಂದ್ಯಗಳನ್ನು ಇವರು ವಿಶ್ವಕಪ್‌ನಲ್ಲಿ ಮಾತ್ರ ಆಡಿದ್ದು ವಿಶೇಷ.
2004ರ ಡಿಸೆಂಬರ್ 26 ರಂದು ಬಾಂಗ್ಲಾದೇಶದ ವಿರುದ್ಧ ODIಗೆ ಪಾದಾರ್ಪಣೆ ಮಾಡಿದ ಶರ್ಮಾ 2007 ರಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧ ಕೊನೆಯ ODI ಪಂದ್ಯ ಆಡಿದ್ದರು. ಪ್ರಸ್ತುತ ಹರಿಯಾಣ ಪೊಲೀಸ್‌ನಲ್ಲಿ ಡಿಎಸ್‌ಪಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.