ಬಾರ್ಬಡೋಸ್(ವೆಸ್ಟ್ ಇಂಡೀಸ್):ಅನುಭವಿ ಆಲ್ರೌಂಡರ್ ಜೇಸನ್ ಹೋಲ್ಡರ್ ಹ್ಯಾಟ್ರಿಕ್ ಸಹಿತ ಮಾರಕ ಬೌಲಿಂಗ್ (27ಕ್ಕೆ 5) ನೆರವಿನಿಂದ ಆತಿಥೇಯ ವೆಸ್ಟ್ ಇಂಡೀಸ್ ತಂಡವು ಇಂಗ್ಲೆಂಡ್ ವಿರುದ್ಧ 5ನೇ ಟಿ-20 ಪಂದ್ಯದಲ್ಲಿ 17 ರನ್ಗಳ ಅಂತರದ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಕೆರಿಬಿಯನ್ನರು ಆಂಗ್ಲರ ವಿರುದ್ಧ 3-2 ಅಂತರದಲ್ಲಿ ಸರಣಿ ಗೆದ್ದಿದ್ದಾರೆ.
ಪಂದ್ಯದ ಅಂತಿಮ ಓವರ್ ಎಸೆದ ಜೇಸನ್ ಹೋಲ್ಡರ್ ನಾಲ್ಕು ವಿಕೆಟ್ ಕಬಳಿಸಿದರು. ಆಗ ಇಂಗ್ಲೆಂಡ್ ಗೆಲುವಿಗೆ 20 ರನ್ ಅಗತ್ಯವಿತ್ತು. ಜೋರ್ಡನ್ ಹಾಗೂ ವಿಕೆಟ್ ಕೀಪರ್ ಬ್ಯಾಟರ್ ಸ್ಯಾಮ್ ಬಿಲ್ಲಿಂಗ್ಸ್(41) ಕ್ರೀಸ್ನಲ್ಲಿದ್ದರು. ಆದರೆ ಮೊದಲ ಎಸೆತ ನೋಬಾಲ್, ನಂತರದ ಎಸೆತದಲ್ಲಿ ಒಂದೂ ರನ್ ನೀಡದ ಹೋಲ್ಡರ್, ಬಳಿಕ ನಾಲ್ಕು ಎಸೆತಗಳಲ್ಲಿ 4 ಹುದ್ದರಿ ಪಡೆದು ಮಿಂಚಿದರು. ಇದು ವಿಂಡೀಸ್ ಪರ ಟಿ-20 ಕ್ರಿಕೆಟ್ನಲ್ಲಿ ಚೊಚ್ಚಲ ಹ್ಯಾಟ್ರಿಕ್ ಸಾಧನೆಯಾಗಿದೆ. ಅಲ್ಲದೆ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಈ ಸಾಧನೆಗೈದ ನಾಲ್ಕನೇ ಬೌಲರ್ ಆಗಿದ್ದಾರೆ.
ವಿಂಡೀಸ್ ನೀಡಿದ 180 ರನ್ ಗುರಿ ಬೆನ್ನಟ್ಟಿದ ಆಂಗ್ಲರು 19.5 ಓವರ್ಗಳಲ್ಲಿ 162 ರನ್ಗೆ ಆಲೌಟ್ ಆದರು. ತಂಡದ ಪರ ಜೇಮ್ಸ್ ವಿನ್ಸ್ ಅರ್ಧಶತಕ (55) ಬಾರಿಸಿದರೆ, ಬಳಿಕ ಬಿಲ್ಲಿಂಗ್ಸ್ 41 ರನ್ ಗಳಿಸಿ ಗೆಲುವಿಗೆ ಹೋರಾಡಿದರು. ನಾಯಕ ಮೋಯಿನ್ ಅಲಿ 14, ಜಾಸನ್ ರಾಯ್ 8, ಬ್ಯಾಂಟನ್ 16 ರನ್ ಬಾರಿಸಿದ್ದು, ಬಿಟ್ಟರೆ ಉಳಿದವರು ಎರಡಂಕಿ ಮೊತ್ತ ತಲುಪಲಿಲ್ಲ. ವಿಂಡೀಸ್ ಪರ ಹೋಲ್ಡರ್ ಹ್ಯಾಟ್ರಿಕ್ ಸಹಿತ 27 ರನ್ಗೆ 5 ಹಾಗೂ ಅಕೀಲ್ ಹೊಸೆನ್ 30ಕ್ಕೆ 4 ವಿಕೆಟ್ ಕಬಳಿಸಿದರು.