ನವದೆಹಲಿ: ಭಾನುವಾರ ನಡೆದ ಪಂದ್ಯದಲ್ಲಿ ರಾಜಸ್ಥಾನ ತಂಡ ಹೈದರಾಬಾದ್ ವಿರುದ್ಧ 72 ರನ್ಗಳ ಅಂತರದಿಂದ ಭರ್ಜರಿ ಜಯ ಸಾಧಿಸುವ ಮೂಲಕ ಐಪಿಎಲ್ ಹೊಸ ಋತುವಿನ ಜರ್ನಿ ಆರಂಭಿಸಿದೆ. ಪಂದ್ಯದಲ್ಲಿ ರಾಜಸ್ಥಾನ ಪರ ಬ್ಯಾಟಿಂಗ್ ವಿಭಾಗದಲ್ಲಿ ಜಾಸ್ ಬಟ್ಲರ್, ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್ ಅಬ್ಬರಿಸಿದರೆ, ಬೌಲಿಂಗ್ನಲ್ಲಿ ಲೆಗ್ ಸ್ಪಿನ್ನರ್ ಯುಜುವೇಂದ್ರ ಚಹಾಲ್ ಮಿಂಚಿದರು.
ಪಂದ್ಯದಲ್ಲಿ ಯುಜುವೇಂದ್ರ ಚಹಾಲ್ 4 ವಿಕೆಟ್ಗಳನ್ನು ಕಿತ್ತು ಅದ್ಭುತ ಪ್ರದರ್ಶನ ತೋರಿದರು. ಚಹಾಲ್ ಬೌಲಿಂಗ್ ದಾಳಿಗೆ ಸಿಲುಕಿದ ಹೈದರಾಬಾದ್ ಆಟಗಾರರಾದ ಮಯಾಂಕ್ ಅಗರ್ವಾಲ್, ಹ್ಯಾರಿ ಬ್ರೂಕ್, ಆದಿಲ್ ರಶೀದ್, ಭುವನೇಶ್ವರ್ ಕುಮಾರ್ ಬಹುಬೇಗನೇ ವಿಕೆಟ್ ಒಪ್ಪಿಸಿ ಹೊರನಡೆದರು. ನಾಲ್ಕು ಓವರ್ ಬೌಲಿಂಗ್ ಮಾಡಿದ ಚಹಾಲ್ 17 ರನ್ಗಳನ್ನಷ್ಟೇ ನೀಡಿ ನಾಲ್ಕು ವಿಕೆಟ್ ಕಿತ್ತು ಸಂಭ್ರಮಿಸಿದರು.
ಇದೇ ಪಂದ್ಯದಲ್ಲಿ ಚಹಾಲ್ ಹೊಸ ದಾಖಲೆ ಬರೆದಿದ್ದಾರೆ. ಟಿ20 ಪಂದ್ಯಗಳಲ್ಲಿ 300 ವಿಕೆಟ್ ಪಡೆದ ಮೊದಲ ಭಾರತೀಯರಾಗಿ ಕ್ರಿಕೆಟ್ ದಾಖಲೆಯ ಪುಟ ಸೇರಿದ್ದಾರೆ. 265 ಟಿ20 ಪಂದ್ಯಗಳಲ್ಲಿ ಚಹಾಲ್ ಈ ಸಾಧನೆ ಮಾಡಿದ್ದಾರೆ. ಇವರ ನಂತರದ ಸ್ಥಾನದಲ್ಲಿ ರವಿಚಂದ್ರನ್ ಅಶ್ವಿನ್, ಪಿಯೂಷ್ ಚಾವ್ಲಾ, ಅಮಿತ್ ಮಿಶ್ರಾ, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್ ಇದ್ದಾರೆ.
ಟಿ20ಯಲ್ಲಿ ಹೆಚ್ಚು ವಿಕೆಟ್ ಪಡೆದ ಭಾರತೀಯ ಆಟಗಾರರು:
- ಯುಜ್ವೇಂದ್ರ ಚಾಹಲ್ - 303
- ಆರ್.ಅಶ್ವಿನ್ - 287
- ಪಿಯೂಷ್ ಚಾವ್ಲಾ - 276
- ಅಮಿತ್ ಮಿಶ್ರಾ - 272
- ಜಸ್ಪ್ರೀತ್ ಬುಮ್ರಾ - 256
- ಭುವನೇಶ್ವರ್ ಕುಮಾರ್ - 256