ಹೈದರಾಬಾದ್ :ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2021ರ ಮೊದಲ ಹಂತದಲ್ಲಿ ಅಂಕಗಳ ಪಟ್ಟಿಯಲ್ಲಿ ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) 7ನೇ ಸ್ಥಾನದಲ್ಲಿತ್ತು. ದ್ವಿತೀಯಾರ್ಧದಲ್ಲಿ ಟೂರ್ನಿ ಆರಂಭವಾದ ಮೇಲೆ ಭರ್ಜರಿ ಕಮ್ಬ್ಯಾಕ್ ಮಾಡಿರುವ ಕೆಕೆಆರ್ ಪ್ಲೇಆಫ್‌ಗೆ ಲಗ್ಗೆಯಿಡುವ ಸನಿಹದಲ್ಲಿದೆ.
ಈಗಾಗಲೇ ಬ್ಯಾಕ್ ಟು ಬ್ಯಾಕ್ ಗೆಲುವು ಸಾಧಿಸಿರುವ ಕೆಕೆಆರ್ ತಂಡ ಪ್ಲೇ ಆಫ್ ಆಸೆಯನ್ನ ಜೀವಂತವಾಗಿರಿಸಿಕೊಂಡಿದೆ. ತಂಡ ಈ ಮಟ್ಟಕ್ಕೆ ಕಮ್ಬ್ಯಾಕ್ ಮಾಡಲು ಮೂಲ ಕಾರಣ ಆಲ್‌ರೌಂಡರ್ ವೆಂಕಟೇಶ್ ಅಯ್ಯರ್ ಎಂದು ಮಾಜಿ ಆಟಗಾರ, ವಿಶ್ಲೇಷಕ ಸಂಜಯ್ ಮಂಜ್ರೇಕರ್ ಹೇಳಿದ್ದಾರೆ.
ವೆಂಕಟೇಶ್ ಅಯ್ಯರ್ ಆರಂಭಿಕನಾಗಿಯೂ ಯಶಸ್ಸು ಕಂಡಿದ್ದಾರೆ. ಹಾಗೆಯೇ ಮಧ್ಯಮ ಓವರ್‌ಗಳಲ್ಲಿ ಬೌಲಿಂಗ್ನಲ್ಲಿಯೂ ತಂಡಕ್ಕೆ ಉತ್ತಮ ಕೊಡುಗೆ ನೀಡುತ್ತಿದ್ದಾರೆ. ಇವರ ಈ ಪ್ರದರ್ಶನ ನೋಡುತ್ತಿದ್ದರೆ ಮುಂದಿನ ಐಪಿಎಲ್ ಹರಾಜಿನಲ್ಲಿ ಈತ "ಅತಿ ಹೆಚ್ಚು ಬೆಲೆ" ಗಳಿಸಬಹುದು ಎಂದು ಮಂಜ್ರೇಕರ್ ಹೇಳಿದ್ದಾರೆ.
"ನನ್ನ ಪ್ರಕಾರ ಈತ 12-14 ಕೋಟಿಗೆ ಹರಾಜಾಗುತ್ತಾನೆ ಎಂದುಕೊಂಡಿದ್ದೇನೆ. ನಾನು ಅವರ ಈ ಟೂರ್ನಿಯ ಪ್ರದರ್ಶನವನ್ನಷ್ಟೆ ನೋಡಿ ಹೇಳುತ್ತಿಲ್ಲ. ಪ್ರಥಮ ದರ್ಜೆ ಹಾಗೂ ರಣಜಿ ಕ್ರಿಕೆಟ್ನಲ್ಲಿನ ಅಂಕಿ-ಅಂಶಗಳನ್ನು ಗಮನಿಸಿದ್ದೇನೆ. ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ 47 ಸರಾಸರಿ ಹೊಂದಿದ್ದು, 92 ಸ್ಟ್ರೈಕ್ರೇಟ್ನಲ್ಲಿ ರನ್ ಗಳಿಸಿದ್ದಾರೆ.
ಹಾಗೆಯೇ ಟಿ-20 ಕ್ರಿಕೆಟ್ನಲ್ಲೂ 37ರ ಸರಾಸರಿಯಲ್ಲಿ ಬ್ಯಾಟ್ ಮಾಡಿದ್ದಾರೆ. ಬೌಲಿಂಗ್ ಕೂಡ ಉತ್ತಮವಾಗಿದೆ. ಕಠಿಣ ಓವರ್‌ಗಳನ್ನು ಬೌಲ್ ಮಾಡಬಲ್ಲರು ಎಂದು ಕೊನೆಯ ಪಂದ್ಯದಲ್ಲಿ ಅವರು ತೋರಿಸಿದ್ದಾರೆ. ಆದುದರಿಂದ ಅವರು ತುಂಬಾ ಹೆಚ್ಚಿನ ಬೆಲೆ ಪಡೆಯಲಿದ್ದಾರೆ" ಎಂದು ಮಂಜ್ರೇಕರ್ ತಿಳಿಸಿದರು.
ಮಧ್ಯಪ್ರದೇಶದ 26 ವರ್ಷದ ಬ್ಯಾಟರ್ ವೆಂಕಟೇಶ್ ಅಯ್ಯರ್, ಈ ಋತುವಿನ ದ್ವಿತೀಯಾರ್ಧದಲ್ಲಿ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ್ದಾರೆ. ಅಯ್ಯರ್ ಆರು ಪಂದ್ಯಗಳಲ್ಲಿ 200ಕ್ಕೂ ಹೆಚ್ಚು ರನ್ ಗಳಿಸಿದ್ದು, ಬೌಲಿಂಗ್ನಲ್ಲಿ 3 ವಿಕೆಟ್ ಕೂಡ ಪಡೆದಿದ್ದಾರೆ.