ಧರ್ಮಶಾಲಾ (ಹಿಮಾಚಲ ಪ್ರದೇಶ) : 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ನ ಪ್ಲೇ ಆಫ್ ಪ್ರವೇಶಕ್ಕೆ ಕೊನೆಯ ಪಂದ್ಯದ ವರೆಗೂ ಹಣಾಹಣಿ ಮುಂದುವರೆದಿದೆ. ಇಂದು ಭಾರತದ ಅತ್ಯಂತ ಸುಂದರ ಕ್ರೀಡಾಂಗಣಗಳಲ್ಲಿ ಒಂದು ಎನಿಸಿದ ಧರ್ಮಶಾಲಾ ಕ್ರೀಡಾಂಗಣದಲ್ಲಿ ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ಮತ್ತು ರಾಜಸ್ಥಾನ ರಾಯಲ್ಸ್ (ಆರ್ಆರ್) ಮುಖಾಮುಖಿಯಾಗುತ್ತಿವೆ. ಸೋತವರು ಲೀಗ್ನಿಂದ ಹೊರಗುಳಿಯಲಿದ್ದಾರೆ. ಎಲ್ಲಾ ತಂಡಗಳಿಗೂ ಒಂದು ಪಂದ್ಯ ಬಾಕಿ ಇದೆ. ಆದರೆ, ಪ್ಲೇ ಆಫ್ಗೆ ಅರ್ಹತೆ ಗಿಟ್ಟಿಸಿಕೊಂಡಿರುವುದು ಹಾಲಿ ಚಾಂಪಿಯನ್ ಆದ ಗುಜರಾತ್ ಟೈಟಾನ್ಸ್ ಮಾತ್ರ.
ಪಂಜಾಬ್ ಕಿಂಗ್ಸ್ ಮತ್ತು ರಾಜಸ್ಥಾನ ರಾಯಲ್ಸ್ ತಲಾ 13 ಪಂದ್ಯಗಳನ್ನು ಆಡಿದ್ದು, ಎರಡೂ ಸಹ 12 ಅಂಕ ಹೊಂದಿದೆ. ಆರ್ಆರ್ ರನ್ ರೇಟ್ ಕಾರಣದಿಂದ 6 ನೇ ಸ್ಥಾನದಲ್ಲಿದ್ದರೆ, ಪಂಜಾಬ್ 8 ರಲ್ಲಿದೆ. ಉಭಯ ತಂಡಗಳಿಗೂ ಪ್ಲೇ ಆಫ್ನ ಹಾದಿ ಇನ್ನೂ ಇದೆ. ಆದರೆ, ಬೇರೆ ತಂಡಗಳ ಸೋಲು ಇತ್ತಂಡಕ್ಕೆ ಅವಕಾಶ ಮಾಡಿಕೊಡಲಿದೆ. ನಾಲ್ಕನೇ ಸ್ಥಾನದಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು 5ರಲ್ಲಿರುವ ಮುಂಬೈ ಇಂಡಿಯನ್ಸ್ ಕೊನೆಯ ಪಂದ್ಯದಲ್ಲಿ ಸೋತು ಕಳಪೆ ರನ್ರೇಟ್ ಪಡೆದಲ್ಲಿ ಇಂದು ಗೆದ್ದ ತಂಡಕ್ಕೆ ಪ್ಲೇ ಆಫ್ ಬಾಗಿಲು ತೆರೆಯಲಿದೆ. ಅದರಲ್ಲೂ ಅವಕಾಶ ಹೆಚ್ಚಿರುವುದು ರಾಜಸ್ಥಾನಕ್ಕೆ. ಏಕೆಂದರೆ ಈಗಾಗಲೇ ಆರ್ಆರ್ +.0140 ರನ್ರೇಟ್ ಹೊಂದಿದೆ.
ಬೆಂಗಳೂರಿನ ಎದುರು ರಾಜಸ್ಥಾನಕ್ಕೆ ಹೀನಾಯ ಸೋಲು: ರಾಜಸ್ಥಾನ ರಾಯಲ್ಸ್ ತವರು ನೆಲವಾದ ಜೈಪುರ್ನಲ್ಲಿ ಆರ್ಸಿಬಿ ವಿರುದ್ಧ ಹೀನಾಯ ಸೋಲನುಭವಿಸಿತು. ಇದರಿಂದ ಆರ್ಆರ್ಗೆ ಪ್ಲೇ ಆಫ್ ಹಾದಿ ಕಠಿಣವಾಗಿದೆ. ಆರ್ಸಿಬಿ ನೀಡಿದ್ದ 172 ರನ್ನ ಗುರಿ ಬೆನ್ನು ಹತ್ತಿದ ರಾಜಸ್ಥಾನ ಕೇವ 59 ರನ್ಗೆ ಆಲ್ ಔಟ್ ಆಗಿ ರನ್ರೇಟ್ ಕಳೆದುಕೊಂಡಿತು. ಈ ಅಲ್ಪ ಮೊತ್ತದ ಸೋಲಿನ ಅವಮಾನದಿಂದ ಆರ್ಆರ್ ಹೊರಬರಲು ದೊಡ್ಡ ಗೆಲುವನ್ನೇ ಪಡೆಯಬೇಕಿದೆ. ದೊಡ್ಡ ಅಂತರದ ಗೆಲುವು ಪ್ಲೇ ಆಫ್ ಕನಸನ್ನು ಜೀವಂತವಾಗಿರಿಸಲಿದೆ ಆದರೆ, ಮೇಲೆ ಹೇಳಿದಂತೆ ಎಂಐ ಮತ್ತು ಆರ್ಸಿಬಿ ಸೋಲು ಕಂಡಲ್ಲಿ ಮಾತ್ರ.