ಕೋಲ್ಕತ್ತಾ, ಪಶ್ಚಿಮ ಬಂಗಾಳ: ಈಡನ್ ಗಾರ್ಡನ್‌ನಲ್ಲಿ ಗುರುವಾರ ರಾತ್ರಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಶಾರುಖ್ ಖಾನ್ ಮಾಲೀಕತ್ವದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಭರ್ಜರಿ ಗೆಲುವು ಸಾಧಿಸಿದೆ. ಪಂದ್ಯದ ಬಳಿಕ ಬ್ಯಾಟಿಂಗ್ ಮಾಸ್ಟರ್ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ತಾರೆ ಶಾರುಖ್ ಖಾನ್ ತಮ್ಮ ಪ್ರೀತಿಯ ಕ್ಷಣವನ್ನು ಹಂಚಿಕೊಂಡರು.
ಈಡನ್ ಗಾರ್ಡನ್ಸ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿಜಯದ ನಂತರ ಶಾರುಖ್ ಖಾನ್ RCB ಸ್ಟಾರ್ ವಿರಾಟ್ ಕೊಹ್ಲಿಯನ್ನು ಅಪ್ಪಿಕೊಂಡು ಅಭಿನಂದನೆಗಳನ್ನು ಸಲ್ಲಿಸಿದರು. ಈ ವೇಳೆ ಈ ಇಬ್ಬರು ಸೆಲೆಬ್ರಿಟಿಗಳು ಶಾರುಖ್ ಖಾನ್ ಅವರ ಇತ್ತೀಚಿಗೆ ಬಿಡುಗಡೆಗೊಂಡ ಸೂಪರ್ ಹಿಟ್ ಸಿನಿಮಾ ಪಠಾಣ್ ಚಿತ್ರದ ಸಾಂಗ್ನ ಸ್ಟೇಪ್ಗಳನ್ನು ವಿರಾಟ್ಗೆ ಕಲಿಸಿಕೊಟ್ಟರು.
ಆರ್‌ಸಿಬಿ ಕ್ರಿಕೆಟಿಗ ವಿರಾಟ್ ಕೊಹ್ಲಿ ಜೊತೆ ಶಾರುಖ್ ಖಾನ್ ಇರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿವೆ. ಐಪಿಎಲ್ 2023ರ ತಮ್ಮ ತವರು ನೆಲದಲ್ಲಿ ನಡೆದ ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಕೆಕೆಆರ್ ಪ್ರಾಬಲ್ಯ ಸಾಧಿಸಿದ ನಂತರ ಶಾರುಖ್ ಖಾನ್ ಅವರು ಸಂಭ್ರಮಾಚರಣೆಯ ಮನಸ್ಥಿತಿಯಲ್ಲಿದ್ದರು.
ಶಾರುಖ್ ಅವರು ವಿರಾಟ್ ಕೊಹ್ಲಿಯೊಂದಿಗೆ ಹೆಜ್ಜೆ ಹಾಕುತ್ತಿರುವುದನ್ನು ವೈರಲ್ ಆದ ಫೋಟೋ ಮತ್ತು ವಿಡಿಯೋಗಳಲ್ಲಿ ನೋಡಬಹುದು. ಈ ಇಬ್ಬರು ಸೆಲೆಬ್ರಿಟಿಗಳು ಒಟ್ಟಿಗೆ ವೇದಿಕೆ ಹಂಚಿಕೊಳ್ಳುವುದರೊಂದಿಗೆ ಇಂಟರ್ನೆಟ್ನಲ್ಲಿ ಸಂಚಲನ ಮೂಡಿಸಿದೆ. ಸುಹಾನಾ ಖಾನ್, ಶಾನಯಾ ಕಪೂರ್ ಮತ್ತು ಶಾರುಖ್ ಒಟ್ಟಿಗೆ ಪಂದ್ಯ ವೀಕ್ಷಣೆಗೆ ಹಾಜರಾಗಿದ್ದರು. ಶನಯಾ ಕಪೂರ್ ನಟ ಸಂಜಯ್ ಕಪೂರ್ ಅವರ ಮಗಳು. ಶಾರುಖ್ ಖಾನ್ ಕ್ರೀಡಾಂಗಣದಲ್ಲಿ ಅಭಿಮಾನಿಗಳತ್ತ ಕೈಬೀಸಿದರು.