ಲಖನೌ:ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಮತ್ತು ಬ್ಯಾಟಿಂಗ್ ಕಿಂಗ್ ವಿರಾಟ್ ಕೊಹ್ಲಿ ಮಧ್ಯೆ ಮತ್ತೆ ಮಾತಿನ ಚಕಮಕಿ ನಡೆದಿದೆ. ನಿನ್ನೆ ರಾತ್ರಿ ಲಖನೌ ಎದುರು ಆರ್ಸಿಬಿ 18 ರನ್ಗಳ ಗೆಲುವು ಸಾಧಿಸಿದ ನಂತರ ಹಸ್ತಲಾಘವದ ವೇಳೆ ಆಟಗಾರರು ಮುಖಾಮುಖಿಯಾದರು. ಈ ವೇಳೆ ಇಬ್ಬರೂ ಪರಸ್ಪರ ಬೈದಾಡಿಕೊಂಡಿದ್ದು, ಪಂದ್ಯದ ಶೇ.100 ರಷ್ಟು ದಂಡ ವಿಧಿಸಲಾಗಿದೆ.
ಪಂದ್ಯದ ವೇಳೆ ಲಖನೌ ಬೌಲರ್ ನವೀನ್ ಉಲ್ ಹಕ್ ನಡೆಗೆ ಕೋಪಗೊಂಡಿದ್ದ ವಿರಾಟ್ ಕೊಹ್ಲಿ ಮೈದಾನದಲ್ಲೇ ಸಿಡಿಮಿಡಿಗೊಂಡಿದ್ದರು. ಬೌಂಡರಿಯಲ್ಲಿ ಕೃನಾಲ್ ಪಾಂಡ್ಯ ಕ್ಯಾಚ್ ಪಡೆದು ಮೂಗಿನ ಮೇಲೆ ಬೆರಳಿಟ್ಟು ಸುಮ್ಮನಿರುವಂತೆ ಸನ್ಹೆ ಮಾಡಿದ್ದರು. ಇದೆಲ್ಲವೂ ಎಲ್ಎಸ್ಜಿ ಮೆಂಟರ್ ಆಗಿರುವ ಗೌತಮ್ ಗಂಭೀರ್ಗೆ ಅಸಮಾಧಾನ ತಂದಿತ್ತು. ಪಂದ್ಯ ಮುಗಿದ ಹಸ್ತಲಾಘವದ ವೇಳೆ ಇದು ಸ್ಫೋಟಗೊಂಡಿತು.
ನವೀನ್ ಉಲ್ ಹಕ್ ಮತ್ತೊಮ್ಮೆ ವಿರಾಟ್ ಜೊತೆ ವಾಗ್ವಾದಕ್ಕಿಳಿದರು. ಬಳಿಕ ವೆಸ್ಟ್ ಇಂಡೀಸ್ನ ಕೈಲ್ ಮಿಲ್ಸ್ ಜೊತೆ ಕೊಹ್ಲಿ ಮಾತನಾಡುತ್ತಿದ್ದಾಗ ಅಲ್ಲಿಗೆ ಬಂದ ಗಂಭೀರ್ ಮಿಲ್ಸ್ರನ್ನು ಕರೆದೊಯ್ದರು. ಈ ವೇಳೆ ಇಬ್ಬರ ಮಧ್ಯೆ ಮಾತಿನ ಚಕಮಕಿ ಆರಂಭಗೊಂಡಿತು.
ಪರಸ್ಪರ ಬೈದಾಡಿಕೊಳ್ಳುತ್ತಾ ಆಕ್ರೋಶದಲ್ಲಿ ಹತ್ತಿರಕ್ಕೆ ಬಂದರು. ಉಭಯ ತಂಡದ ಆಟಗಾರರು ಮಧ್ಯಪ್ರವೇಶಿಸಿ ಸಮಾಧಾನಪಡಿಸಲು ಯತ್ನಿಸಿದರು. ವಿರಾಟ್ ಕೊಹ್ಲಿ ಹಾಗೂ ಗೌತಮ್ ಗಂಭೀರ್ ನಡುವಣ ಜಗಳದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಕೊಹ್ಲಿ ಸನ್ಹೆ ಮೂಲಕ ತಿರುಗೇಟು:ಏಪ್ರಿಲ್ 10 ರಂದು ಬೆಂಗಳೂರಿನಲ್ಲಿ ನಡೆದಿದ್ದ ಪಂದ್ಯದಲ್ಲಿ ಲಖನೌ ವಿರುದ್ಧ ಆರ್ಸಿಬಿ ಸೋಲು ಕಂಡಿತ್ತು. ಪಂದ್ಯ ಮುಗಿದರೂ ಅಭಿಮಾನಿಗಳು ತಂಡವನ್ನು ಹುರಿದುಂಬಿಸುತ್ತಿದ್ದರು. ಇದು ಗಂಭೀರ್ಗೆ ಕೋಪ ತರಿಸಿತ್ತು. ಪ್ರೇಕ್ಷರತ್ತ ತಿರುಗಿ ಬಾಯಿ ಮುಚ್ಚಿಕೊಂಡಿರುವಂತೆ ಸನ್ಹೆ ಮಾಡಿದ್ದರು. 1 ವಿಕೆಟ್ ಗೆಲುವಿನ ಬಳಿಕ ಅತಿಯಾಗಿ ಸಂಭ್ರಮ ಕೂಡ ಮಾಡಿತ್ತು.