ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡ ರೀಸ್ ಟೋಪ್ಲೆ ಮತ್ತು ರಜತ್ ಪಾಟಿದಾರ್ ಬದಲಿಗೆ ದಕ್ಷಿಣ ಆಫ್ರಿಕಾದ ವೇಯ್ನ್ ಪಾರ್ನೆಲ್ ಹಾಗೂ ಕರ್ನಾಟಕದ ವೈಶಾಕ್ ವಿಜಯ್ ಕುಮಾರ್ ಅವರನ್ನು ತಂಡಕ್ಕೆ ಆಯ್ಕೆ ಮಾಡಿದೆ. ಪ್ರಸ್ತುತ ಲೀಗ್‌ನಲ್ಲಿ ಆರ್ಸಿಬಿಯ ಮೂವರು ಆಟಗಾರರು ಗಾಯದಿಂದಾಗಿ ಆಡುತ್ತಿಲ್ಲ.
ಬೆಂಗಳೂರಿನ ಪಿಚ್ನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವಾಗ ಟೋಪ್ಲೆ ಭುಜದ ಗಾಯಕ್ಕೆ ತುತ್ತಾಗಿದ್ದರು. ಚೇತರಿಸಿಕೊಂಡು ತಂಡಕ್ಕೆ ಮರಳುವ ಭರವಸೆ ಇತ್ತು. ಆದರೆ ಪೆಟ್ಟು ಗಂಭೀರ ಸ್ವರೂಪದ್ದಾಗಿದ್ದು ಬ್ರಿಟನ್ಗೆ ತೆರಳಿದ್ದಾರೆ. ಹಿಮ್ಮಡಿ ಗಾಯದಿಂದ ಬಳಲುತ್ತಿರುವ ರಜತ್ ಪಾಟಿದಾರ್ ಟೂರ್ನಿಯ ಮುಂದಿನ ದಿನಗಳಲ್ಲಿ ಸೇರಿಕೊಳ್ಳಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಇತ್ತೀಚಿನ ವೈದ್ಯಕೀಯ ವರದಿಯಂತೆ ಅವರೂ ಸಹ ಐಪಿಎಲ್ನಿಂದ ಸಂಪೂರ್ಣವಾಗಿ ಹೊರಗುಳಿದಿದ್ದಾರೆ.
ರಜತ್ ಬದಲಿಗೆ ಆಟಗಾರರನ್ನು ಆರ್ಸಿಬಿ ತೆಗೆದುಕೊಳ್ಳುವುದಿಲ್ಲ ಎಂಬ ಸುದ್ದಿ ಹರಿದಾಡಿತ್ತು. ಆದರೆ ಆರ್ಸಿಬಿ ಪಾಟಿದಾರ್ ಬದಲಿಗೆ ಕರ್ನಾಟಕದ ಹುಡುಗನನ್ನು ಮೂಲ ಬೆಲೆಗೆ ಖರೀದಿಸಿದೆ. ವೈಶಾಕ್ ವಿಜಯ್ ಕುಮಾರ್ ದೇಶೀಯ ಕ್ರಿಕೆಟ್‌ನಲ್ಲಿ ಕರ್ನಾಟಕ ಪ್ರತಿನಿಧಿಸುತ್ತಿದ್ದಾರೆ. 14 ಟಿ 20 ಪಂದ್ಯಗಳನ್ನು ಆಡಿದ್ದು, 22 ವಿಕೆಟ್ ಕಬಳಿಸಿದ್ದಾರೆ. ವೈಶಾಕ್‌ರನ್ನು ಆರ್ಸಿಬಿ 20 ಲಕ್ಷ ರೂ.ಗೆ ತಂಡ ಸೇರಿಸಿಕೊಂಡಿದೆ.
ಮೊದಲ ಪಂದ್ಯದಲ್ಲಿ ಉತ್ತಮ ಬೌಲಿಂಗ್ ಮಾಡಿದ್ದ ಟೋಪ್ಲೆ ಈಗ ತವರಿಗೆ ಮರಳಿದ್ದು, ಅವರ ಜಾಗಕ್ಕೆ ದಕ್ಷಿಣ ಆಫ್ರಿಕಾದ ವೇಗಿ ವೇಯ್ನ್ ಪಾರ್ನೆಲ್ ಬಂದಿದ್ದಾರೆ. ಇವರು ಹರಿಣ ಪಡೆಯಲ್ಲಿ ಅಂತಾರಾಷ್ಟ್ರೀಯ 56 ಟಿ20, 6 ಟೆಸ್ಟ್ ಮತ್ತು 73 ಏಕದಿನ ಪಂದ್ಯಗಳನ್ನಾಡಿದ್ದು, ಟಿ20ಯಲ್ಲಿ 59 ವಿಕೆಟ್ಗಳನ್ನು ಪಡೆದಿದ್ದಾರೆ. ಎಡಗೈ ವೇಗಿ 26 ಐಪಿಎಲ್ ಪಂದ್ಯಗಳನ್ನು ಆಡಿರುವ ಅನುಭವ ಹೊಂದಿದ್ದಾರೆ. 75 ಲಕ್ಷಕ್ಕೆ ಆರ್ಸಿಬಿ ವೇಯ್ನ್ ಪಾರ್ನೆಲ್ ಅವರನ್ನು ಕೊಂಡುಕೊಂಡಿದೆ.
ಮುಂಬೈ ವಿರುದ್ಧದ ಪಂದ್ಯದಲ್ಲಿ ಟೋಪ್ಲೆ 2 ಓವರ್ ಮಾಡಿ ಕ್ಯಾಮರೂನ್ ಗ್ರೀನ್ ವಿಕೆಟ್ ಪಡೆದು 14 ರನ್ ಬಿಟ್ಟುಕೊಟ್ಟಿದ್ದರು. ಆದರೆ ಕ್ಷೇತ್ರ ರಕ್ಷಣೆ ವೇಳೆ ಡೈವಿಂಗ್ ಮಾಡಿದ್ದು ಬಲ ಭುಜಕ್ಕೆ ಹೆಚ್ಚು ಗಾಯವಾಗಿತ್ತು. ನಿನ್ನೆ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ವಿರುದ್ಧದ ಪಂದ್ಯದಲ್ಲಿ ಟೋಪ್ಲೆ ಬದಲಾಗಿ ಡೇವಿಡ್ ವಿಲ್ಲಿ ಕಣಕ್ಕಿಳಿದಿದ್ದರು. ಪಂದ್ಯ ಮುಗಿಯುವಾಗ ಟೋಪ್ಲೆ ತವರಿಗೆ ಮರಳಿರುವ ಸುದ್ದಿಯನ್ನು ಫ್ರಾಂಚೈಸಿ ನೀಡಿತ್ತು.
2023ರ ಐಪಿಎಲ್ನಲ್ಲಿ ಆರ್ಸಿಬಿ ಉತ್ತಮ ಆರಂಭ ಕಂಡಿದೆ. ತವರು ಮೈದಾನದಲ್ಲಿ ಮುಂಬೈ ವಿರುದ್ಧದ ಮ್ಯಾಚನ್ನು 8 ವಿಕೆಟ್ಗಳಿಂದ ಗೆದ್ದುಕೊಂಡಿದೆ. ಆದರೆ ನಿನ್ನೆ ಕೆಕೆಆರ್ ಎದುರಿನ ಎರಡನೇ ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯ ಎದುರಿಸಿ 81 ರನ್ಗಳಿಂದ ಹೀನಾಯ ಸೋಲು ಕಂಡಿತು. ಮುಂದಿನ ಪಂದ್ಯ ಏಪ್ರಿಲ್ 10 ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಲಕ್ನೋ ಸೂಪರ್ ಚೈಂಟ್ಸ್ ವಿರುದ್ಧ ನಡೆಯಲಿದೆ.
ಇದನ್ನೂ ಓದಿ:ಆರ್ಸಿಬಿಗೆ ಶಾಕ್ ಮೇಲೆ ಶಾಕ್.. ಬಲ ಭುಜಕ್ಕೆ ಗಾಯ, ಮತ್ತೊಬ್ಬ ಆಟಗಾರ ರೂಲ್ಡ್ ಔಟ್