ಮುಂಬೈ (ಮಹಾರಾಷ್ಟ್ರ): 16ನೇ ಆವೃತ್ತಿಯ ಪ್ಲೇ ಆಫ್ ಹಾದಿ ಎಲ್ಲಾ ತಂಡಗಳಿಗೂ ಕಠಿಣ ಹಾದಿಯಾಗಿದೆ. ಮೊದಲ ಸ್ಥಾನದಲ್ಲಿರುವ ಗುಜರಾತ್ ಸೇಫ್ ಎಂದು ಸಹ ಹೇಳಲಾಗದು. ಏಕೆಂದರೆ ನಾಲ್ಕು ಸ್ಥಾನದಲ್ಲಿ ಉಳಿಯ ಬೇಕಾದಲ್ಲಿ ಇನ್ನೂ ಎರಡು ಪಂದ್ಯಗಳನ್ನು ಗೆಲ್ಲುವ ಅಗತ್ಯವಿದೆ. ಅಂಕ ಪಟ್ಟಿಯ ಕೊನೆಯ ಸ್ಥಾನದಲ್ಲಿರುವ ಡೆಲ್ಲಿಗೂ ಇನ್ನೂ ನಾಲ್ಕರ ಘಟ್ಟಕ್ಕೆ ಏರುವ ಅವಕಾಶ ಇದ್ದು, ಉತ್ತಮ ರನ್ ರೇಟ್ನಿಂದ ಎಲ್ಲಾ ಪಂದ್ಯಗಳನ್ನು ಗೆಲ್ಲಬೇಕಿದೆ. ಹೀಗಿರುವಾಗ ಮಧ್ಯದಲ್ಲಿರುವ ರಾಯಲ್ ಚಾಲೆಂಜರ್ಸ್ ಮತ್ತು ಮುಂಬೈ ಇಂಡಿಯನ್ಸ್ ಮೇಲೆ ಒತ್ತಡ ಹೆಚ್ಚೇ ಇದೆ.
ಐಪಿಎಲ್ನ ಇಂದಿನ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಮತ್ತು ಮುಂಬೈ ಇಂಡಿಯನ್ಸ್ (ಎಂಐ) ಮುಖಾಮುಖಿಯಾಗುತ್ತಿವೆ. ಉಭಯ ತಂಡಗಳು ಲೀಗ್ನಲ್ಲಿ ಇದುವರೆಗೆ 10 ಪಂದ್ಯಗಳನ್ನು ಆಡಿದ್ದು, 5ರಲ್ಲಿ ಗೆದ್ದಿವೆ. ಆದರೆ ರನ್ ರೇಟ್ ಕಡಿಮೆ ಇರುವ ಕಾರಣ ಮುಂಬೈ ಎಂಟನೇ ಸ್ಥಾನದಲ್ಲಿದ್ದು, ಆರ್ಸಿಬಿ ಆರರಲ್ಲಿದೆ. ಸದ್ಯ, ಇಂದಿನ ಪಂದ್ಯ ಗೆದ್ದರೆ ಮೂರಕ್ಕೆ ಸೋತಲ್ಲಿ ಏಳಕ್ಕೆ ಎಂಬ ಪರಿಸ್ಥಿತಿ ರಾಯಲ್ ಚಾಲೆಂಜರ್ಸ್ ಬೆಂಗಳೂರಿನದ್ದಾಗಿದೆ. ಅತ್ತ ಮುಂಬೈ ಪರಿಸ್ಥಿತಿಯೂ ಭಿನ್ನವಿಲ್ಲ. ಗೆದ್ದರೆ ಮೂರಕ್ಕೇರಿದರೆ ಸೋತರೆ ಎಂಟರಲ್ಲೇ ಉಳಿಯಲಿದೆ.
16ನೇ ಆವೃತ್ತಿಯ ಐಪಿಎಲ್ನ ಪಂದ್ಯವನ್ನು ಆರ್ಸಿಬಿ ಮುಂಬೈ ಇಂಡಿಯನ್ಸ್ ವಿರುದ್ಧವೇ ಆರಂಭಿಸಿತ್ತು. ಮುಂಬೈ ಇಂಡಿಯನ್ಸ್ ನೀಡಿದ್ದ 171 ರನ್ನ ಗುರಿಯನ್ನು ಆರ್ಸಿಬಿ ವಿರಾಟ್ ಕೊಹ್ಲಿ 82 ಮತ್ತು ಫಾಫ್ ಡು ಪ್ಲೆಸಿಸ್ ಅವರ 73 ರನ್ನ ಸಹಾಯದಿಂದ 16.2 ಓವರ್ನಲ್ಲೇ ಗೆದ್ದುಕೊಂಡಿತ್ತು. ಈ ಮೂಲಕ ಆರ್ಸಿಬಿ ಆವೃತ್ತಿಯಲ್ಲಿ ಶುಭಾರಂಭ ಮಾಡಿತ್ತು. ಮೊದಲ ಪಂದ್ಯದಿಂದ ಫಾರ್ಮ್ನಲ್ಲಿದ್ದು ಘರ್ಜಿಸುತ್ತಿರುವ ಫಾಫ್ ಮತ್ತು ವಿರಾಟ್ ಜೋಡಿ ಬಹುತೇಕ ಪಂದ್ಯಗಳಲ್ಲಿ ಉತ್ತಮ ಆರಂಭವನ್ನು ನೀಡಿದ್ದಾರೆ. ಇಬ್ಬರು ಬ್ಯಾಟರ್ಗಳು ತಂಡಕ್ಕೆ ಆಧಾರ ಸ್ತಂಭವಾಗಿದ್ದಾರೆ.
ರೋಹಿತ್ ವೈಫಲ್ಯ: ಮುಂಬೈ ಇಂಡಿಯನ್ಸ್ಗೆ ನಾಯಕ ರೋಹಿತ್ ಶರ್ಮಾ ಅವರೇ ವಿಫಲರಾಗಿದ್ದಾರೆ. ಕಳೆದ ಪಂದ್ಯದಲ್ಲಿ ಆರಂಭಿಕ ಸ್ಥಾನವನ್ನು ಗ್ರೀನ್ ಬಿಟ್ಟುಕೊಟ್ಟು ಮೂರನೇ ವಿಕೆಟ್ ಆಗಿ ಬಂದು ತಮ್ಮನ್ನು ತಾವೇ ಪ್ರಯೋಗಕ್ಕೆ ಒಡ್ಡಿಕೊಂಡಿದ್ದರು. ಆದರೆ ಅದು ಸಹ ಪ್ರಯೋಜನವಾಗಲಿಲ್ಲ. ಗ್ರೀನ್ ಬೇಗ ವಿಕೆಟ್ ಒಪ್ಪಿಸಿದರೆ, ರೋಹಿತ್ ಶರ್ಮಾ ಮತ್ತೆ ಡಕ್ ಆದರು. ಇದರಿಂದ ಐಪಿಎಲ್ನಲ್ಲಿ ಹೆಚ್ಚು ಬಾರಿ ಶೂನ್ಯಕ್ಕೆ ಔಟ್ ಆದ ಆಟಗಾರ ಎಂಬ ಕುಖ್ಯಾತಿಗೂ ಒಳಗಾದರು.