ಚೆನ್ನೈ:ಚೆನ್ನೈ ಸೂಪರ್ ಕಿಂಗ್ಸ್ ತಂಡದ ನೂತನ ನಾಯಕನಾಗಿ ಆಯ್ಕೆಯಾಗಿದ್ದ ಆಲ್ರೌಂಡರ್ ರವೀಂದ್ರ ಜಡೇಜಾ ಇದೀಗ ತಮ್ಮ ಜವಾಬ್ದಾರಿಯನ್ನು ಮರಳಿ ಮಹೇಂದ್ರ ಸಿಂಗ್ ಧೋನಿ ಅವರಿಗೆ ಹಸ್ತಾಂತರಿಸಿದ್ದಾರೆ. ಆಟದ ಮೇಲೆ ಹೆಚ್ಚಿನ ಗಮನ ಹರಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿದುಬಂದಿದೆ. ಹೀಗಾಗಿ, ಉಳಿದ ಆರು ಪಂದ್ಯಗಳಲ್ಲಿ ಸಿಎಸ್ಕೆ ನಾಯಕತ್ವ ಜವಾಬ್ದಾರಿಯನ್ನ ಧೋನಿ ನೋಡಿಕೊಳ್ಳಲಿದ್ದಾರೆ. ಈ ಸಲದ ಐಪಿಎಲ್ನಲ್ಲಿ ತಂಡ ಪ್ಲೇ-ಆಫ್ಗೆ ಲಗ್ಗೆ ಹಾಕಬೇಕಾದ್ರೆ ತಂಡ ಉಳಿದ ಎಲ್ಲ ಪಂದ್ಯಗಳಲ್ಲೂ ಗೆಲ್ಲಲೇಬೇಕಾಗಿದೆ.
ಧೋನಿಗೆ ಸಿಎಸ್ಕೆ ನಾಯಕತ್ವ ಬಿಟ್ಟುಕೊಟ್ಟ ಜಡೇಜಾ.. ಕಾರಣ? - ಐಪಿಎಲ್ 2022
2022ರ ಐಪಿಎಲ್ನಲ್ಲಿ ಚೆನ್ನೈ ತಂಡದ ನಾಯಕನಾಗಿದ್ದ ರವೀಂದ್ರ ಜಡೇಜಾ ಇದೀಗ ತಮ್ಮ ಜವಾಬ್ದಾರಿಯನ್ನು ಮಹೇಂದ್ರ ಸಿಂಗ್ ಧೋನಿಗೆ ಹಸ್ತಾಂತರ ಮಾಡಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ಸಿಎಸ್ಕೆ ಫ್ರಾಂಚೈಸಿ ಅಧಿಕೃತವಾಗಿ ಪ್ರಕಟಣೆ ಹೊರಡಿಸಿದೆ. ಇಂಡಿಯನ್ ಪ್ರೀಮಿಯರ್ ಲೀಗ್ 2022 ಟೂರ್ನಿ ಆರಂಭಗೊಳ್ಳುವುದಕ್ಕೂ ಕೇವಲ ಎರಡು ದಿನ ಮುಂಚಿತವಾಗಿ ತಂಡದ ನಾಯಕತ್ವವನ್ನ ಧೋನಿ ಬಿಟ್ಟುಕೊಟ್ಟಿದ್ದರು. ಇದೀಗ ಅರ್ಧ ಪಂದ್ಯಗಳು ಮುಕ್ತಾಯಗೊಂಡಿದ್ದು, ಇದರ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಆಟದ ಮೇಲೆ ಗಮನ ಹರಿಸುವ ಉದ್ದೇಶದಿಂದ ಜಡೇಜಾ ಈ ನಿರ್ಧಾರ ಕೈಗೊಂಡಿದ್ದಾಗಿ ತಿಳಿದುಬಂದಿದೆ. ಜೊತೆಗೆ ಎಂ ಎಸ್ ಧೋನಿ ಅವರೇ ತಂಡವನ್ನು ಮುನ್ನಡೆಸಬೇಕು ಎಂದು ವಿನಂತಿಸಿದ್ದಾರೆ. ಪ್ರಸಕ್ತ ಐಪಿಎಲ್ನಲ್ಲಿ ಜಡೇಜಾ ಆಡಿರುವ 8 ಪಂದ್ಯಗಳಿಂದ ಕೇವಲ 112ರನ್ಗಳಿಕೆ ಮಾಡಿದ್ದು, 5 ವಿಕೆಟ್ ಕಬಳಿಸಿದ್ದಾರೆ. 2012ರಿಂದಲೂ ಜಡೇಜಾ ಚೆನ್ನೈ ತಂಡದ ಭಾಗವಾಗಿದ್ದು, ಈ ಸಲದ ಹರಾಜು ಪ್ರಕ್ರಿಯೆಗೂ ಮುಂಚಿತವಾಗಿ ತಂಡ ಅವರಿಗೆ ಬರೋಬ್ಬರಿ 16 ಕೋಟಿ ರೂ. ನೀಡಿ ರಿಟೈನ್ ಮಾಡಿಕೊಂಡಿತ್ತು.
2008ರಿಂದಲೂ 2021ರವರೆಗೆ ಚೆನ್ನೈ ತಂಡದ ನಾಯಕತ್ವ ಜವಾಬ್ದಾರಿ ಹೊತ್ತುಕೊಂಡಿದ್ದ ಧೋನಿ, ನಾಲ್ಕು ಸಲ ಟ್ರೋಫಿ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಆದರೆ, ಈ ಸಲ ನಾಯಕತ್ವ ಜವಾಬ್ದಾರಿಯನ್ನ ಜಡೇಜಾ ಹೆಗಲ ಮೇಲೆ ಹಾಕಿದ್ದರು. ಪ್ರಸಕ್ತ ಐಪಿಎಲ್ನಲ್ಲಿ ಸಿಎಸ್ಕೆ ಆಡಿರುವ 8 ಪಂದ್ಯಗಳ ಪೈಕಿ ಕೇವಲ ಎರಡರಲ್ಲಿ ಗೆಲುವು ಸಾಧಿಸಿದೆ.