ಮುಂಬೈ: ಕನ್ನಡಿಗ ರಾಬಿನ್ ಉತ್ತಪ್ಪ(88) ಮತ್ತು ಆಲ್ರೌಂಡರ್ ಶಿವಂ ದುಬೆ(95) ಅವರ ಅಬ್ಬರದ ಅರ್ಧಶತಕದ ನೆರವಿನಿಂದ ಸಿಎಸ್ಕೆ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ 217 ರನ್ಗಳ ಬೃಹತ್ ಮೊತ್ತದ ಗುರಿ ನೀಡಿದೆ.
15ನೇ ಆವೃತ್ತಿಯಲ್ಲಿ ಚೊಚ್ಚಲ ಗೆಲುವಿನ ಹುಡುಕಾಟದಲ್ಲಿದ್ದ ಚೆನ್ನೈ ತಂಡ ಟಾಸ್ ಸೋತು ಬ್ಯಾಟಿಂಗ್ ಇಳಿಯಲ್ಪಟ್ಟಿತ್ತು. ಆದರೆ ಋತುರಾಜ್ ಗಾಯಕ್ವಾಡ್(17) ಈ ಪಂದ್ಯದಲ್ಲಿ ಅಲ್ಪ ಮೊತ್ತಕ್ಕೆ ವಿಕೆಟ್ ಒಪ್ಪಿಸುವ ಮೂಲಕ ನಿರಾಶೆಯನುವಿಸಿದರೆ, ಮೊಯೀನ್ ಅಲಿ(3) ರನ್ಔಟ್ ಆದರು.
36ಕ್ಕೆ 2 ವಿಕೆಟ್ ಕಳೆದುಕೊಂಡಿದ್ದ ಸಿಎಸ್ಕೆ ಅಲ್ಪಮೊತ್ತಕ್ಕೆ ಕುಸಿಯುವ ಬೀತಿ ಎದುರಿಸಿತ್ತು. ಆದರೆ 3ನೇ ವಿಕೆಟ್ ಒಂದಾದ ರಾಬಿನ್ ಉತ್ತಪ್ಪ ಮತ್ತು ಶಿವಂ ದುಬೆ ಆರ್ಸಿಬಿ ಬೌಲರ್ಗಳನ್ನು ಮನಬಂದಂತೆ ದಂಡಿಸಿದರು. ಈ ಜೋಡಿ 165 ರನ್ ಬೃಹತ್ ಕೊಡುಗೆ ನೀಡಿತು. 50 ಎಸೆತಗನ್ನು ಎದುರಿಸಿದ ಉತ್ತಪ್ಪ 4 ಬೌಂಡರಿ ಮತ್ತು 9 ಸಿಕ್ಸರ್ಗಳ ಸಹಿತ 88 ರನ್ಗಳಿಸಿದರೆ, ಶಿವಂ ದುಬೆ 45 ಎಸೆತಗಳಲ್ಲಿ 5 ಬೌಂಡರಿ ಮತ್ತು 8 ಸಿಕ್ಸರ್ಗಳ ಸಹಿತ ಅಜೇಯ 95 ರನ್ಗಳಿಸಿದರು.
10 ಓವರ್ಗಳಲ್ಲಿ 60 ರನ್ಗಳಿಸಿದ್ದ ಸಿಎಸ್ಕೆ ಈ ಜೋಡಿಯ ಅಬ್ಬರದಿಂದ ಮುಂದಿನ 10 ಓವರ್ಗಳಲ್ಲಿ 156 ರನ್ ಸೂರೆಗೈದಿತು. ಒಟ್ಟಾರೆ 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 216 ರನ್ಗಳಿಸಿತು.