ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2023ರ 16ನೇ ಆವೃತ್ತಿಗೆ ಕ್ಷಣಗಣನೆ ಆರಂಭವಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ನಾಯಕ ಫಾಫ್ ಡು ಪ್ಲೆಸಿಸ್ ಉದ್ಯಾನ ನಗರಿಗೆ ಆಗಮಿಸಿದ್ದು ತಂಡ ಸೇರಿಕೊಂಡಿದ್ದಾರೆ. ಇದಕ್ಕೂ ಮುನ್ನ ದಕ್ಷಿಣ ಆಫ್ರಿಕಾದ SA20 ಮೊದಲ ಆವೃತ್ತಿಯ ಕ್ರಿಕೆಟ್ ಲೀಗ್ನಲ್ಲಿ ಪಾಲ್ಗೊಂಡಿದ್ದ ಫಾಪ್, ಜೋಬರ್ಗ್ ಸೂಪರ್ ಕಿಂಗ್ಸ್ ತಂಡದ ನಾಯಕತ್ವ ವಹಿಸಿದ್ದರು.
ಈ ತಂಡವನ್ನು ಸೆಮಿಫೈನಲ್ ವರೆಗೂ ಕೊಂಡೊಯ್ದಿದ್ದರು. ಇದೀಗ ಐಪಿಎಲ್ನಲ್ಲಿ ಆರ್‌ಸಿಬಿ ತಂಡ ಮುನ್ನಡೆಸಲಿದ್ದು ಕಪ್ ಮೇಲೆ ಫಾಪ್ ತಂಡ ಕಣ್ಣಿಟ್ಟಿದೆ. ಕಳೆದ ವರ್ಷ ವಿರಾಟ್ ಕೊಹ್ಲಿಯಿಂದ ಆರ್‌ಸಿಬಿ ತಂಡದ ನಾಯಕತ್ವ ವಹಿಸಿಕೊಂಡ ದಕ್ಷಿಣ ಆಫ್ರಿಕಾದ ಆಟಗಾರ ತಂಡವನ್ನು ನಾಲ್ಕನೇ ಸ್ಥಾನಕ್ಕೆ ಕೊಂಡೊಯ್ದಿದ್ದರು.
ಬೆಂಗಳೂರು ತಲುಪಿದ ನಂತರ ಹರ್ಷ ವ್ಯಕ್ತಪಡಿಸಿರುವ ಫಾಪ್, "ಬೆಂಗಳೂರಿಗೆ ಮರಳಿರುವುದು ನನಗೆ ಸಂತಸ ತಂದಿದೆ. ಕಳೆದ ಸೀಸನ್‌ನಲ್ಲಿ ಇಲ್ಲಿಯ ಪ್ರೇಕ್ಷಕರ ಹರ್ಷೋದ್ಗಾರ ಅನುಭವಿಸಲು ಆಗಿರಲಿಲ್ಲ. ಈ ವರ್ಷ ಉತ್ಸುಕನಾಗಿದ್ದೇನೆ. ಈ ಬಾರಿ ಜನರಿಂದ ತುಂಬಿರುವ ಕ್ರೀಡಾಂಗಣದಲ್ಲಿ ಆಟ ಆಡುತ್ತೇವೆ. ಇದಕ್ಕಾಗಿಯೇ ನಾನು ಕಾಯುತ್ತಿದ್ದೇನೆ" ಎಂದು ಹೇಳಿರುವ ವಿಡಿಯೋವನ್ನು ಆರ್‌ಸಿಬಿ ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡಿದೆ. ದ.ಆಫ್ರಿಕಾದ ಮಾಜಿ ನಾಯಕ ಡು ಪ್ಲೆಸಿಸ್ ಅವರನ್ನು 2022ರ ಹರಾಜಿನಲ್ಲಿ ಆರ್‌ಸಿಬಿ 7 ಕೋಟಿ ರೂಗೆ ಖರೀದಿಸಿದೆ.
31 ರಿಂದ ಚುಟುಕು ಕ್ರಿಕೆಟ್ ಶುರು: ಮಾರ್ಚ್ 31ರಿಂದ 16ನೆ ಆವೃತ್ತಿಯ ಐಪಿಎಲ್ ಚುಟುಕು ಕ್ರಿಕೆಟ್ ಸಂಭ್ರಮ ಆರಂಭವಾಗಲಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಮೈದಾನದಲ್ಲಿ 15ನೇ ಆವೃತ್ತಿಯ ಚಾಂಪಿಯನ್ ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಸೆಣಸಲಿವೆ. 70 ಪಂದ್ಯಗಳನ್ನೊಳಗೊಂಡ ಲೀಗ್ ಮೇ 28 ಕ್ಕೆ ಮುಕ್ತಾಯಗೊಳ್ಳಲಿದೆ.