ಮುಂಬೈ:ಸತತ ಸೋಲುಗಳಿಂದ ಕಂಗೆಟ್ಟಿದ್ದ 5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ಕೊನೆಗೂ ಮೊದಲ ಜಯ ದಾಖಲಿಸಿದೆ. ಕೊನೆಯ ಓವರ್ ಥ್ರಿಲ್ಲರ್ನಲ್ಲಿ ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 6 ವಿಕೆಟ್ಗಳ ಗೆಲುವು ಸಾಧಿಸಿತು. ಡೆಲ್ಲಿ ಆಡಿದ ನಾಲ್ಕೂ ಪಂದ್ಯಗಳಲ್ಲಿ ಸೋತು ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲೇ ಉಳಿದಿದೆ.
ಈ ಬಾರಿಯ ಸೀಸನ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ತೀವ್ರ ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಿದೆ. ನಾಯಕ ಡೇವಿಡ್ ವಾರ್ನರ್ ಹೊರತಾಗಿ ಯಾವೊಬ್ಬ ಆಟಗಾರನೂ ಸ್ಥಿರ ಪ್ರದರ್ಶನ ನೀಡುತ್ತಿಲ್ಲ. ಈ ಪಂದ್ಯದಲ್ಲಿ ವಾರ್ನರ್ ಮತ್ತು ಅಕ್ಷರ್ ಪಟೇಲ್ ಅರ್ಧಶತಕ ಬಾರಿಸಿದಾಗ್ಯೂ ತಂಡ 19.4 ಓವರ್ಗಳಲ್ಲಿ 172 ರನ್ಗೆ ಆಲೌಟ್ ಆಯಿತು. ಅಂತಿಮ ಓವರ್ನಲ್ಲಿ ತಂಡ 4 ವಿಕೆಟ್ ಕಳೆದುಕೊಂಡು, ದಿಢೀರ್ ಕುಸಿತ ಕಂಡಿತು.
172 ರನ್ಗಳ ಗುರಿ ಬೆನ್ನತ್ತಿದ ಮುಂಬೈ ಇಂಡಿಯನ್ಸ್ ಅದ್ಭುತ ಆರಂಭ ಪಡೆದರೂ ನಿರ್ಣಾಯಕ ಹಂತದಲ್ಲಿ ಗೊಂದಲಕ್ಕೀಡಾಗಿ ಸೋಲಿನ ಭೀತಿ ಎದುರಿಸಿತು. ಕೊನೆಯಲ್ಲಿ ಟಿಮ್ ಡೇವಿಡ್(13) ಮತ್ತು ಕ್ಯಾಮರೂನ್ ಗ್ರೀನ್(17) ತಂಡಕ್ಕೆ ಉಪಯುಕ್ತ ಕಾಣಿಕೆ ಗೆಲುವು ತಂದುಕೊಟ್ಟರು. ನಾಯಕ ರೋಹಿತ್ ಶರ್ಮಾ ಮತ್ತು ಇಶಾನ್ ಕಿಶನ್ ಮೊದಲ ವಿಕೆಟ್ಗೆ 71 ಸೇರಿಸ ಭರ್ಜರಿ ಆರಂಭ ನೀಡಿದರು.
31 ರನ್ ಗಳಿಸಿ ಆಡುತ್ತಿದ್ದ ಇಶಾನ್ ಕಿಶನ್ ರೋಹಿತ್ ಶರ್ಮಾರ ತಪ್ಪಾದ ನಿರ್ಧಾರಕ್ಕೆ ಬಲಿಯಾದರು. ಒಂಟಿ ರನ್ ಕದಿಯಲು ಯತ್ನಿಸುತ್ತಿದ್ದ ವೇಳೆ ಕಿಶನ್ ರನೌಟ್ ಆಗಿ ನಿರ್ಗಮಿಸಿದರು. ಬಳಿಕ ಬಂದ ತಿಲಕ್ ವರ್ಮಾ 4 ಸಿಕ್ಸರ್ ಸಮೇತ 41 ಸಿಡಿಸಿ ಮತ್ತೊಂದು ಜೊತೆಯಾಟ ನೀಡಿದರು. ಬಂದಷ್ಟೇ ವೇಗವಾಗಿ ಸೂರ್ಯಕುಮಾರ್ ಯಾದವ್ ಸೊನ್ನೆಗೆ ಔಟಾಗಿ ನಿರ್ಗಮಿಸಿದರು. ರೋಹಿತ್ ಶರ್ಮಾ ರನ್ ಕಲೆ ಹಾಕುವ ಭರದಲ್ಲಿ 65 ರನ್ ಗಳಿಸಿದ್ದಾಗ ವಿಕೆಟ್ ನೀಡಿದರು. ಇವರ ಇನಿಂಗ್ಸ್ನಲ್ಲಿ 4 ಸಿಕ್ಸರ್ 6 ಬೌಂಡರಿ ಇದ್ದವು.
ಕೊನೆಯಲ್ಲಿ ಕುತೂಹಲ:ಮುಂಬೈ ಇಂಡಿಯನ್ಸ್ ತಂಡ ಗೆಲುವು ಸಾಧಿಸಲು ಕೊನೆಯ ಓವರ್ನಲ್ಲಿ 5 ರನ್ ಅಗತ್ಯವಿತ್ತು. ಆ್ಯನ್ರಿಚ್ ನಾಟ್ಜೆ ಬಿಗುವಿನ ಬೌಲಿಂಗ್ ಮಾಡಿದರು. ಕೊನೆಯ ಎಸೆತದಲ್ಲಿ 2 ರನ್ ಬೇಕಿದ್ದಾಗ ಒತ್ತಡಕ್ಕೊಳಗಾದ ತಂಡ ಕೊನೆಗೂ ಓಟ ಮುಗಿಸಿ ಗೆಲುವು ಸಾಧಿಸಿತು. ಡೆತ್ಓವರ್ನಲ್ಲಿ ನಿಖರ ದಾಳಿ ನಡೆಸಿದಾಗ್ಯೂ ಡೆಲ್ಲಿ ಸೋಲು ಕಂಡಿತು
ವಾರ್ನರ್ ಮೂರನೇ ಫಿಫ್ಟಿ:ಇದಕ್ಕೂ ಮೊದಲು ಬ್ಯಾಟ್ ಮಾಡಿದ್ದ ಡೆಲ್ಲಿ ತಂಡ ಮತ್ತೆ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು. ನಾಯಕ ಡೇವಿಡ್ ವಾರ್ನರ್(51) ಈ ಸೀಸನ್ನಲ್ಲಿ ಆಡಿದ 4 ಪಂದ್ಯಗಳಲ್ಲಿ 3 ನೇ ಅರ್ಧಶತಕ ಬಾರಿಸಿದರು. ಪೃಥ್ವಿ ಶಾ 15, ಮನೀಶ್ ಪಾಂಡೆ 26 ರನ್ ಗಳಿಸಿದರು. ಮಧ್ಯಮ ಕ್ರಮಾಂಕದಲ್ಲಿ ಆಲ್ರೌಂಡರ್ ಅಕ್ಷರ್ ಪಟೇಲ್ ಭರ್ಜರಿ ಬ್ಯಾಟ್ ಮಾಡಿದರು. 5 ಸಿಕ್ಸರ್ 4 ಬೌಂಡರಿ ಸಮೇತ 54 ರನ್ ಮಾಡಿ ಚೊಚ್ಚಲ ಅರ್ಧಶತಕ ಸಿಡಿಸಿದರು.
ಓದಿ:ಹರ್ಷಲ್ ಪಟೇಲ್ ಮಾಡಿದ ಮಂಕಡಿಂಗ್ ಔಟ್ ಏಕಿಲ್ಲ? ಎಂಸಿಸಿ ಕಾನೂನು ಏನು?