ಚೆನ್ನೈ:ಐಪಿಎಲ್ ಟೂರ್ನಿಯ ಸೂಪರ್ ಮ್ಯಾಚ್ಗೆ ಇಂದು ಚೈನ್ನೈ ಸಾಕ್ಷಿಯಾಯಿತು. ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಲಖನೌ ಸೂಪರ್ ಜೈಂಟ್ಸ್ ತಂಡಗಳ ನಡುವಿನ ಹಣಾಹಣಿ ರೋಚಕ ಘಟ್ಟಕ್ಕೆ ತಲುಪಿತು. ಇದರಲ್ಲಿ ಧೋನಿ ಪಡೆ ಮೊದಲ ಗೆಲುವು ದಾಖಲಿಸಿತು. ರಾಹುಲ್ ಪಡೆ ಕೊನೆಯವರೆಗೆ ಹೋರಾಡಿ ಸೋಲು ಕಂಡಿತು.
ಇಲ್ಲಿನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಎಂಎಸ್ ಧೋನಿ ಟೀಂ 12 ರನ್ಗಳಿಂದ ಜಯ ದಾಖಲಿಸಿದೆ. ಮೊದಲು ಬ್ಯಾಟಿಂಗ್ಗೆ ಇಳಿದ ಚೆನ್ನೈ 217 ರನ್ಗಳ ಬೃಹತ್ ಮೊತ್ತ ಪೇರಿಸಿತು. ಈ ಗುರಿ ಬೆನ್ನಟ್ಟಿದ ಎಲ್ಎಸ್ಜಿ ತಂಡ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 205 ರನ್ಗಳು ಬಾರಿಸಿ ಸೋಲೊಪ್ಪಿಕೊಂಡಿತು.
ನಾಯಕ ಕೆಎಲ್ ರಾಹುಲ್ ಜೊತೆಗೆ ಕ್ರೀಸ್ಗೆ ಬಂದ ಕೈಲ್ ಮೇಯರ್ಸ್ ತಂಡಕ್ಕೆ ಉತ್ತಮ ಆರಂಭ ಒದಗಿಸಿದರು. ಕೇವಲ 4 ಓವರ್ಗಳು ಆಗುವಷ್ಟರಲ್ಲಿ ಈ ಜೋಡಿ ತಂಡದ ಮೊತ್ತವನ್ನು 50 ರನ್ಗಳ ಗಡಿ ದಾಟಿಸಿತು. ಅಲ್ಲದೇ, ಮೊದಲ ವಿಕೆಟ್ಗೆ 79 ರನ್ಗಳ ಕಲೆ ಹಾಕಿತು. ಇದರಲ್ಲೂ ಕೇಲ್ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಬಿರುಸಿನಿಂದ ಬ್ಯಾಟ್ ಬೀಸಿದ ಕೈಲ್ ಆಕರ್ಷಕ ಅರ್ಧಶತಕ ಬಾರಿಸಿದರು. ಆದರೆ, ಇದರ ಬೆನ್ನಲ್ಲೇ ಮೊಯೀನ್ ಅಲಿ ಎಸೆತದಲ್ಲಿ ಮೇಯರ್ಸ್ ವಿಕೆಟ್ ಒಪ್ಪಿಸಿದರು. ಕೈಲ್ ಮೇಯರ್ಸ್ ಕೇವಲ 22 ಬಾಲ್ಗಳಲ್ಲಿ ಎಂಟು ಬೌಂಡರಿ ಮತ್ತು ಎರಡು ಸಿಕ್ಸರ್ಗಳ ಸಮೇತ 53 ಸಿಡಿಸಿದರು.
ನಂತರ ಬಂದ ದೀಪಕ್ ಹುಡಾ (2) ಬೇಗ ಔಟಾದರು. ಇದರ ಬೆನ್ನಲ್ಲೇ 18 ಎಸೆತಗಳಲ್ಲಿ ಎರಡು ಬೌಂಡರಿಗಳ ಸಮೇತ 20 ರನ್ ಬಾರಿಸಿದ್ದ ನಾಯಕ ರಾಹುಲ್ ಕೂಡ ವಿಕೆಟ್ ಒಪ್ಪಿಸಿದರು. ಕೃನಾಲ್ ಪಾಂಡ್ಯ (9) ಸಹ ಬೇಗ ಪೆವಿಲಿಯನ್ ಸೇರಿದರು. ಮಾರ್ಕಸ್ ಸ್ಟೋನಿಸ್ 18 ಬಾಲ್ಗಳು ಎದುರಿಸಿ 21 ರನ್ಗಳ ಕೊಡುಗೆ ನೀಡಿದರು.
ಇದರ ನಡುವೆ ವಿಕೆಟ್ ಕೀಪರ್ ನಿಕೋಲಸ್ ಪೂರನ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದರು. 18 ಎಸೆತಗಳಲ್ಲಿ ಮೂರು ಸಿಕ್ಸರ್ಗಳು ಮತ್ತು ಎರಡು ಬೌಂಡರಿಗಳೊಂದಿಗೆ 32 ಪೂರನ್ ಬಾರಿಸಿದರು. ಆಯುಷ್ ಬಡೋನಿ 23 ಮತ್ತು ಕೃಷ್ಣಪ್ಪ ಗೌತಮ್ ಅಜೇಯ 17 ರನ್ ಮತ್ತು ಮಾ್ಕ್ ವುಡ್ ಅಜೇಯ 10 ರನ್ಗಳ ಕಾಣಿಕೆ ನೀಡಿದರು. ಅದರೆ, ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ಸಾಧ್ಯವಾಗಲಿಲ್ಲ. ಅಂತಿಮವಾಗಿ ಲಖನೌ 205 ರನ್ಗಳು ಗಳಿಸಲು ಮಾತ್ರ ಶಕ್ತವಾಯಿತು.
ಇದಕ್ಕೂ ಮುನ್ನಆರಂಭಿಕ ಆಟಗಾರರ ಶತಕದ ಜೊತೆಯಾಟ ಮತ್ತು ಅಂಬಟಿ ರಾಯುಡು ಅವರ ಅಬ್ಬರದ ಬ್ಯಾಟಿಂಗ್ನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡ 7 ವಿಕೆಟ್ ನಷ್ಟಕ್ಕೆ 217 ರನ್ ಗಳಿಸಿತು. ಕಳೆದ ಪಂದ್ಯದಂತೆ ಮಾರ್ಕ್ ವುಡ್ ಬೌಲಿಂಗ್ ಮಾಡಿ 3 ವಿಕೆಟ್ ಪಡೆದರೆ ಹಾಗೂ ಪಿಚ್ನ ಸಹಾಯ ಪಡೆದು ರವಿ ಬಿಷ್ಣೋಯ್ ಸಹ ಮೂರು ವಿಕೆಟ್ ಕಬಳಿಸಿದರು. ಆದರೆ ರನ್ನ ವೇಗಕ್ಕೆ ಕಡಿವಾಣ ಹಾಕಲಾಗಲಿಲ್ಲ.