ಮುಂಬೈ: ಪ್ರತಿ ವರ್ಷ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (ಐಪಿಎಲ್) ಕೆಲವು ಆಟಗಾರರು ಹರಾಜಿನಲ್ಲಿ ಹೆಚ್ಚಿನ ಗಮನವನ್ನು ಸೆಳೆಯುತ್ತಾರೆ. ದೊಡ್ಡ ಮೊತ್ತಕ್ಕೆ ಬಿಕರಿಯಾಗುವ ಆಟಗಾರರ ಮೇಲೆ ಹೆಚ್ಚಿನ ನಿರೀಕ್ಷೆಗಳು ಹುಟ್ಟಿಕೊಳ್ಳುತ್ತವೆ. ಆದರೆ ಕೆಲವೊಮ್ಮೆ ಈ ನಿರೀಕ್ಷೆಗಳು ಹುಸಿಯಾಗುವುದು ಉಂಟು. ಆಟಗಾರರ ಮೇಲೆ ಪ್ರಾಂಚೈಸಿ ಹೆಚ್ಚಿನ ಮೊತ್ತ ಕೊಡಲು ಪ್ರಮುಖ ಕಾರಣ ಅವರ ಹಿಂದಿನ ಅಂಕಿ ಅಂಶಗಳಾಗಿರುತ್ತವೆ. ಆದರೆ ಪಂದ್ಯಗಳಲ್ಲಿ ಅಂತಹ ಪ್ರದರ್ಶನ ಬಾರದಿದ್ದಾಗ ತಂಡ ನಷ್ಟ ಅನುಭವಿಸಿದ್ದು ಇದೆ.
ಉದಾಹರಣೆಗೆ ನಾವು ಇಂಗ್ಲೆಂಡ್ ಟೆಸ್ಟ್ ನಾಯಕ ಮತ್ತು ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಅವರನ್ನು ತೆಗೆದುಕೊಳ್ಳಬಹುದು. 2017ರಲ್ಲಿ ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ ತಂಡದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು. 2018ರ ಮೆಗಾ ಹರಾಜಿನಲ್ಲಿ ರಾಜಸ್ಥಾನ್ ರಾಯಲ್ಸ್ 12.50 ಕೋಟಿಗೆ ಖರೀದಿಸಿತು. 2018ರ ಆವೃತ್ತಿಯ ಐಪಿಎಲ್‌ನಲ್ಲಿ 13 ಪಂದ್ಯಗಳನ್ನು ಆಡಿದ ಅವರು ಕೇವಲ 198 ರನ್ ಗಳಿಸಿದ್ದರು ಮತ್ತು ಎಂಟು ವಿಕೆಟ್ ಮಾತ್ರ ಪಡೆದುಕೊಂಡರು.
2019ರ ಹರಾಜಿನಲ್ಲಿ ರಾಜಸ್ಥಾನ್ ರಾಯಲ್ಸ್ಗೆ ಭಾರತೀಯ ವೇಗಿ ಜಯದೇವ್ ಉನಾದ್ಕತ್ ಅವರು 8.4 ಕೋಟಿ ಬಿಕರಿಯಾಗಿದ್ದರು. ಅವರು 2019ರಲ್ಲಿ ಹರಾಜಿನಲ್ಲಿ ಖರೀದಿಯಾದ ಅತ್ಯಂತ ದುಬಾರಿ ಆಟಗಾರರಾಗಿದ್ದರು. 2019 ರ ಋತುವಿನಲ್ಲಿ 11 ಪಂದ್ಯಗಳಲ್ಲಿ 10 ವಿಕೆಟ್‌ಗಳನ್ನು ಗಳಿಸಿದ ಉನಾದ್ಕತ್ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾದರು.
ಸ್ಯಾಮ್ ಕರನ್:ಇಂಗ್ಲೆಂಡ್‌ನ ಆಲ್‌ರೌಂಡರ್ ಮತ್ತು ವೈಟ್-ಬಾಲ್ ಪರಿಣಿತ ಸ್ಯಾಮ್ ಕರನ್ ಅವರು ಐಪಿಎಲ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಖರೀದಿಯಾಗಿದ್ದಾರೆ. ಪಂಜಾಬ್ ಕಿಂಗ್ಸ್ ಕರನ್ ಅವರನ್ನು 18.5 ಕೋಟಿ ರೂ.ಗೆ ತಂಡಕ್ಕೆ ಸೇರಿಸಿಕೊಂಡಿದೆ. 2022 ರ ಟಿ20 ವಿಶ್ವಕಪ್‌ನಲ್ಲಿ ಅಂತಿಮ ಪಂದ್ಯ ಮತ್ತು ಟೂರ್ನಮೆಂಟ್ ಶ್ರೇಷ್ಠ ಆಟಗಾರಗಾರ ಎಂಬ ಟೈಟಲ್ ಪಡೆದುಕೊಂಡಿದ್ದರು.
ಕ್ಯಾಮರೂನ್ ಗ್ರೀನ್:ರೆಡ್ ಬಾಲ್ ಮತ್ತು ವೈಟ್ ಬಾಲ್ ಕ್ರಿಕೆಟ್ ಎರಡರಲ್ಲೂ ಮಿಂಚುವ ಮೂಲಕ ಕ್ರಿಕೆಟ್ ಜಗತ್ತನ್ನು ಬಿರುಗಾಳಿ ಎಬ್ಬಿಸಿದ ಆಸ್ಟ್ರೇಲಿಯಾದ ಯುವ ಆಲ್‌ರೌಂಡರ್ ಕ್ಯಾಮರೂನ್ ಗ್ರೀನ್ ಅವರನ್ನು ಮುಂಬೈ ಇಂಡಿಯನ್ಸ್ ತಂಡ 17.5 ಕೋಟಿ ಕೊಟ್ಟು ಖರೀದಿಸಿದೆ. ಕಳೆದ ವರ್ಷ ಭಾರತದಲ್ಲಿ ನಡೆದ ಟಿ20 ಸರಣಿಯಲ್ಲಿ ಗ್ರೀನ್ ಆಸ್ಟ್ರೇಲಿಯಾದ ಅಗ್ರ ಪ್ರದರ್ಶನ ನೀಡಿದ್ದರು.