ಹೈದರಾಬಾದ್:ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ, ಪಂಜಾಬ್ ಕಿಂಗ್ಸ್ ತಂಡದ ಮುಖ್ಯ ಕೋಚ್ ಅನಿಲ್ ಕುಂಬ್ಳೆಗೆ ಇದೀಗ ಫ್ರಾಂಚೈಸಿ ಕೊಕ್ ನೀಡಿದೆ. ಹಲವು ಆವೃತ್ತಿಗಳಿಂದ ಪಂಜಾಬ್ ತಂಡದ ಕೋಚ್ ಆಗಿ ಸೇವೆ ಸಲ್ಲಿಸುತ್ತಿದ್ದ ಅವರನ್ನು ದಿಢೀರ್ ಕೈಬಿಡಲಾಗಿದೆ.
ಈವರೆಗೆ ಒಮ್ಮೆಯೂ ಚಾಂಪಿಯನ್ ಪಟ್ಟ ಅಲಂಕರಿಸದ ಪಂಜಾಬ್ ಕಿಂಗ್ಸ್ ತಂಡದ ಕೋಚ್ ಆಗಿ ಕನ್ನಡಿಗ ಅನಿಲ್ ಕುಂಬ್ಳೆ 2020ರಲ್ಲಿ ಆಯ್ಕೆಯಾಗಿದ್ದರು. ಕುಂಬ್ಳೆ ಮಾರ್ಗದರ್ಶನದಲ್ಲಿ ಪಂಜಾಬ್ ತಂಡ ಆಡಿದ ಮೂರು ಆವೃತ್ತಿಗಳಲ್ಲಿ ಒಮ್ಮೆಯೂ ಪ್ಲೇ-ಆಫ್ ಹಂತ ತಲುಪಿಲ್ಲ. ಇವರ ಸಾರಥ್ಯದಲ್ಲಿ ತಂಡ ಆಡಿರುವ 42 ಪಂದ್ಯಗಳಲ್ಲಿ ಕೇವಲ 19 ಪಂದ್ಯಗಳಲ್ಲಿ ಮಾತ್ರ ಗೆದ್ದಿದೆ. ಹೀಗಾಗಿ, ಅವರನ್ನು ಮ್ಯಾನೇಜ್ಮೆಂಟ್ ಕೈಬಿಟ್ಟಿದೆ.
ಪ್ರಾಥಮಿಕ ಮಾಹಿತಿ ಪ್ರಕಾರ, ತಂಡದ ಮಾಲೀಕರು ಈ ಮಹತ್ವದ ನಿರ್ಧಾರ ಕೈಗೊಂಡಿದ್ದು, ಹೊಸ ಕೋಚ್ ಆಯ್ಕೆ ಮಾಡಲು ನಿರ್ಧರಿಸಿದ್ದಾರೆಂದು ಹೇಳಲಾಗುತ್ತಿದೆ. ಅನಿಲ್ ಕುಂಬ್ಳೆ ತಂಡದ ಕೋಚ್ ಆಗಿ ಆಯ್ಕೆಯಾಗುವುದಕ್ಕೂ ಮೊದಲು ಪಂಜಾಬ್ ತಂಡದ ಪರ ಸಂಜಯ ಬಂಗಾರ್(2014-16), ವಿರೇಂದ್ರ ಸೆಹ್ವಾಗ್(2017), ಬ್ರಾಂಡ್ ಹಾಡ್ಜ್(2018), ಮೈಕ್ ಹಸೆನ್(2019) ಕೋಚ್ ಆಗಿ ಸೇವೆ ಸಲ್ಲಿಸಿದ್ದಾರೆ.
ಇನ್ನೂ ವರದಿ ಪ್ರಕಾರ ಅನಿಲ್ ಕುಂಬ್ಳೆ ಜೊತೆಗೆ ಫ್ರಾಂಚೈಸಿ ಮೂರು ವರ್ಷಗಳ ಒಪ್ಪಂದ ಮಾಡಿಕೊಂಡಿದ್ದು, ಅದು ಈ ಸೆಪ್ಟೆಂಬರ್ನಲ್ಲಿ ಮುಕ್ತಾಯಗೊಳ್ಳಲಿದೆ. ಹೀಗಾಗಿ ಅವರನ್ನು ಮುಂದುವರೆಸದಿರಲು ನಿರ್ಧರಿಸಿದೆ ಎಂದು ಹೇಳಲಾಗ್ತಿದೆ. ಅನಿಲ್ ಕುಂಬ್ಳೆ ಸ್ಥಾನಕ್ಕೆ ಇದೀಗ ಇಂಗ್ಲೆಂಡ್ ತಂಡಕ್ಕೆ 2019ರ ಐಸಿಸಿ ಏಕದಿನ ವಿಶ್ವ ಕಪ್ ಗೆದ್ದುಕೊಟ್ಟ ಕೋಚ್ ಟ್ರೆವೊರ್ ಬೇಲಿಸ್ ಅಥವಾ ಇಂಗ್ಲೆಂಡ್‌ನ ಮಾಜಿ ನಾಯಕ ಇಯಾನ್ ಮಾರ್ಗನ್ ಕೋಚ್ ಆಗಿ ಆಯ್ಕೆಯಾಗುವ ಸಾಧ್ಯತೆ ದಟ್ಟವಾಗಿದೆ. ಮುಂದಿನ ಕೆಲ ದಿನಗಳಲ್ಲಿ ಕೋಚ್ ಹೆಸರು ಬಹಿರಂಗಗೊಳ್ಳುವ ಸಾಧ್ಯತೆ ಇದೆ. ಈ ತಂಡದ ನಾಯಕನಾಗಿ ಕನ್ನಡಿಗ ಮಯಾಂಕ್ ಅಗರವಾಲ್ ಇದ್ದಾರೆ. ಪ್ರಾಥಮಿಕ ಮಾಹಿತಿ ಪ್ರಕಾರ ಅವರಿಗೂ ಕೊಕ್ ನೀಡಿ, ಬೇರೆ ಪ್ಲೇಯರ್ಗೆ ಮಣೆ ಹಾಕುವ ಸಾಧ್ಯತೆ ಇದೆ ಎಂಬ ಮಾತು ಕೇಳಿ ಬರಲು ಶುರುವಾಗಿದೆ.
ಇದನ್ನೂ ಓದಿ:ಕುಂಬ್ಳೆ ಅವರಲ್ಲಿನ ಹೋರಾಟದ ಗುಣ ಪಾಂಜಾಬ್ ತಂಡಕ್ಕೆ ವರ್ಗವಾಗಿದೆ: ಗವಾಸ್ಕರ್
ಕಳೆದ ಕೆಲ ದಿನಗಳ ಹಿಂದೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಕೂಡ ತನ್ನ ಮುಖ್ಯ ಕೋಚ್ ಬದಲಾವಣೆ ಮಾಡಿದೆ. ಬ್ರೆಂಡನ್ ಮೆಕಲಮ್ ಅವರ ಜಾಗಕ್ಕೆ ಮಧ್ಯಪ್ರದೇಶ ರಣಜಿ ಕ್ರಿಕೆಟ್ ತಂಡದ ಕೋಚ್ ಚಂದ್ರಕಾಂತ್ ಪಂಡಿತ್ ಅವರನ್ನು ನೇಮಕ ಮಾಡಿದೆ.