ಕಾಬೂಲ್ :ಯುಎಇಯಲ್ಲಿ ನಡೆಯುತ್ತಿರುವ 2021ರ ಐಪಿಎಲ್ನ 2ನೇ ಹಂತದ ಪಂದ್ಯಗಳನ್ನು ಅಫ್ಘಾನಿಸ್ತಾನದಲ್ಲಿ ಪ್ರಸಾರ ಮಾಡುವುದಕ್ಕೆ ತಾಲಿಬಾನ್ ಸರ್ಕಾರ ನಿಷೇಧಿಸಿದೆ.
ಭಾನುವಾರದಿಂದ ಯುಎಇಯಲ್ಲಿ ಐಪಿಎಲ್ನ 2ನೇ ಭಾಗ ಆರಂಭವಾಗಿದೆ. ವಿಶ್ವದಾದ್ಯಂತ ಸುಮಾರು 100ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಪ್ರಸಾರವಾಗುತ್ತಿದೆ.
ಕೇವಲ ಚೀನಾ, ಪಾಕಿಸ್ತಾನ ಇದೀಗ ತಾಲಿಬಾನ್ ಕೈಯಲ್ಲಿ ಸಿಲುಕಿರುವ ಅಫ್ಘಾನಿಸ್ತಾನದಲ್ಲೂ ಶ್ರೀಮಂತ ಲೀಗ್ಗೆ ನಿಷೇಧಿಸಲಾಗಿದೆ. ಈ ಲೀಗ್ನಲ್ಲಿ ಮುಸ್ಲಿಂ ತತ್ವಕ್ಕೆ ವಿರುದ್ಧವಾದ ವಿಚಾರಗಳಿವೆ ಎಂದು ತಾಲಿಬಾನ್ ಸರ್ಕಾರದ ಇಂಡಿಯನ್ ಪ್ರೀಮಿಯರ್ ಲೀಗ್ ಅನ್ನು ನಿಷೇಧಿಸಿದೆ.
ಅಫ್ಘಾನಿಸ್ಥಾನದಲ್ಲಿ ತಾಲಿಬಾನ್ ತನ್ನ ಅಧಿಪತ್ಯ ಸ್ಥಾಪಿಸುತ್ತಿದ್ದಂತೆ ಕ್ರೀಡೆ, ಸಿನಿಮಾ ಸೇರಿ ಹಲವಾರು ಮನರಂಜನೆ ಮೂಲಗಳನ್ನು ನಿಷೇಧಿಸಿದ್ದಲ್ಲದೆ ಯಾವುದೇ ಕ್ರೀಡೆಯಲ್ಲಿ ಮಹಿಳೆಯರು ಸ್ಪರ್ಧಿಸುವುದನ್ನು ನಿಷೇಧಿಸಿದೆ.
"ಐಪಿಎಲ್ ಇಸ್ಲಾಂ ತತ್ವಕ್ಕೆ ವಿರುದ್ಧವಾದ ವಿಷಯಗಳನ್ನು ಒಳಗೊಂಡಿದೆ. ಅಲ್ಲಿ ಹುಡುಗಿಯರು ನೃತ್ಯ ಮಾಡುತ್ತಾರೆ ಮತ್ತು ಕೂದಲನ್ನು ಬಿಟ್ಟಿರುವ ಮಹಿಳೆಯರು ಅಲ್ಲಿ ಭಾಗವಹಿಸುತ್ತಾರೆ. ಇದು ಇಸ್ಲಾಂ ತತ್ವಕ್ಕೆ ವಿರುದ್ಧವಾಗಿದೆ. ಹೀಗಾಗಿ, ಅಫ್ಘಾನಿಸ್ತಾನದಲ್ಲಿ ಐಪಿಎಲ್ ಪ್ರಸಾರಕ್ಕೆ ತಾಲಿಬಾನ್ ನಿಷೇಧ ಹೇರಿದೆ" ಎಂದು ಅಫ್ಘನ್ ಕ್ರಿಕೆಟ್ ಮಂಡಳಿಯ ಮಾಜಿ ಮೀಡಿಯಾ ಮ್ಯಾನೇಜರ್ ಮತ್ತು ಪತ್ರಕರ್ತ ಎಂ ಇಬ್ರಾಹಿಂ ಮೊಮಾಂಡ್ ಟ್ವೀಟ್ ಮೂಲಕ ತಿಳಿಸಿದ್ದಾರೆ.
ಇಸ್ಲಾಮಿಸ್ಟ್‌ಗಳು ಪುರುಷರು ಕ್ರಿಕೆಟ್ ಆಡುವ ಬಗ್ಗೆ ಯಾವುದೇ ತಕರಾರಿಲ್ಲ. ವಿದೇಶಿ ಸೇನಾ ಪಡೆಗಳು ಅಫ್ಘನ್ನಿಂದ ಹೊರಡುತ್ತಿದ್ದಂತೆ ರಾಜಧಾನಿ ಕಾಬೂಲ್‌ನಲ್ಲಿ ಪಂದ್ಯವನ್ನಾಡಿಸಿ ತಮ್ಮ ಬೆಂಬಲವಿದೆ ಎಂದು ತಿಳಿಸಿದ್ದರು. ಇನ್ನು, ಅಫಘಾನಿಸ್ತಾನದ ಕ್ರೀಡಾ ಮಹಾನಿರ್ದೇಶಕ ಬಶೀರ್ ಅಹ್ಮದ್ ರುಸ್ತಮ್‌ಝೈ ಕಳೆದ ವಾರ ಮಹಿಳೆಯರು ಕ್ರೀಡೆಯಲ್ಲಿ ಭಾಗವಹಿಸಲು ಅನುಮತಿ ನೀಡಲಾಗುವುದೇ ಎಂಬ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದರು.
ತಾಲಿಬಾನಿಗಳ ಈ ಕಠಿಣ ನಿಯಮ ಅಫ್ಘನ್ ಟೆಸ್ಟ್ ಕ್ರಿಕೆಟ್ ಭವಿಷ್ಯವನ್ನು ಪ್ರಶ್ನಿಸಿದೆ. ಯಾಕೆಂದರೆ, ಮಹಿಳೆಯರಿಗೆ ಕ್ರಿಕೆಟ್ನಲ್ಲಿ ಅವಕಾಶ ನೀಡದಿದ್ದರೆ, ಆ ರಾಷ್ಟ್ರ ಟೆಸ್ಟ್ ಕ್ರಿಕೆಟ್ ಆಡುವುದಕ್ಕೆ ಸಾಧ್ಯವಿಲ್ಲ. ಇದೇ ಕಾರಣದಿಂದ ಆಸ್ಟ್ರೇಲಿಯಾ ಕ್ರಿಕೆಟ್ ಅಫ್ಘಾನಿಸ್ತಾನ ವಿರುದ್ಧದ ಸರಣಿ ನಿಷೇಧಿಸಿದೆ. ಜೊತೆಗೆ ಆ ರಾಷ್ಟ್ರವನ್ನು ನಿಷೇಧಿಸಬೇಕೆಂದು ಐಸಿಸಿಗೆ ಮನವಿ ಮಾಡಿದೆ.
ಇದನ್ನು ಓದಿ: IPL 2021: ಗಾಯಕ್ವಾಡ್ ಭರ್ಜರಿ ಆಟ... ಮುಂಬೈ ವಿರುದ್ಧ ಚೆನ್ನೈ ಜಯಭೇರಿ