ಮುಂಬೈ : ರಾಜಸ್ಥಾನ್ ರಾಯಲ್ಸ್ ವಿರುದ್ಧ ಹೀನಾಯವಾಗಿ 6 ವಿಕೆಟ್ಗಳ ಸೋಲಿಗೆ ತಂಡದ ಬ್ಯಾಟಿಂಗ್ ವೈಫಲ್ಯವೇ ಕಾರಣ ಎಂದು ಕೆಕೆಆರ್ ತಂಡದ ನಾಯಕ ಇಯಾನ್ ಮಾರ್ಗನ್ ದೂರಿದ್ದಾರೆ.
ಶನಿವಾರ ಮುಂಬೈನ ವಾಂಖೆಡೆಯಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕತಾ ನೈಟ್ ರೈಡರ್ಸ್ ತಂಡ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು ಕೇವಲ 133 ರನ್ಗಳಿಸಿತ್ತು. ಈ ಮೊತ್ತವನ್ನು ಬೆನ್ನತ್ತಿದ ರಾಜಸ್ಥಾನ್ ತಂಡ 18.5 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು.
"ಬ್ಯಾಟಿಂಗ್ ನಮ್ಮನ್ನು ನಿರಾಸೆಗೊಳಿಸಿತು. ಇಡೀ ಇನ್ನಿಂಗ್ಸ್‌ನಾದ್ಯಂತ ನಮ್ಮಲ್ಲಿ ಸಾಕಷ್ಟು ಉದ್ದೇಶದ ಕೊರತೆ ಕಂಡು ಬಂದಿತು. ನಾವು ಆರಂಭದಿಂದಲೇ ಆಟದಲ್ಲಿ ಹಿಂದೆ ಉಳಿದಿಬಿಟ್ಟೆವು. ನಾವು ಎದುರಾಳಿ ಬೌಲರ್‌ಗಳನ್ನು ಸಾಕಷ್ಟು ಒತ್ತಡಕ್ಕೆ ಒಳಪಡಿಸಲಿಲ್ಲ.
ರಾಜಸ್ಥಾನ್ ಪಿಚ್‌ಗೆ ಹೆಚ್ಚು ಹೊಂದಿಕೊಂಡಿತು. ಈ ಪಂದ್ಯದಲ್ಲಿ ನಾವು ಬಹುಶಃ 40 ರನ್ ಕಡಿಮೆ ಗಳಿಸಿದ್ದೆವು. ನಾವು ಗಳಿಸಿದ ಮೊತ್ತ ಟಿ20 ಕ್ರಿಕೆಟ್ನಲ್ಲಿ ಬಹಳಷ್ಟು ಕಡಿಮೆಯಾಗಿತ್ತು" ಎಂದು ಮಾರ್ಗನ್ ಪಂದ್ಯದ ನಂತರ ಹೇಳಿದರು.
ಇದೇ ಸಂದರ್ಭದಲ್ಲಿ ಮಾರ್ಗನ್ ವಾಂಖೆಡೆಯಲ್ಲಿ ನಿನ್ನೆ ಆಡಿದ ಪಿಚ್ ಟಿ20 ಆಟಕ್ಕೆ ಉತ್ತಮವಲ್ಲ ಎಂದಿದ್ದಾರೆ. " ಈ ದಿನದ ಪಿಚ್ ಉತ್ತಮವಾಗಿರಲಿಲ್ಲ, ಅಲ್ಲಿ ಆಡುವುದು ತುಂಬಾ ಸವಾಲಿನ್ನದ್ದಾಗಿತ್ತು. ನಾವು ಯಾವಾಗ ಆಕ್ರಮಣಕಾರಿಯಾಗಿ ಆಡಲು ಮುಂದಾದರೂ ವಿಕೆಟ್ಗಳು ಬೀಳುತ್ತಿದ್ದವು" ಎಂದು ಅವರು ಹೇಳಿದ್ದಾರೆ.
16 ಕೋಟಿ ಪಡೆದು ದುಬಾರಿಯೆನಿಸಿದ್ದ ಕ್ರಿಸ್ ಮೋರಿಸ್ 4 ವಿಕೆಟ್ ಪಡೆದು ಕೆಕೆಆರ್ ತಂಡವನ್ನು ಕಟ್ಟಿಹಾಕಿದರೆ, ನಾಯಕ ಸಂಜು ಸಾಮ್ಸನ್ ಅಜೇಯ 42 ರನ್ಗಳಿಸಿ ತಂಡವನ್ನು ಗೆಲುವಿನ ಗಡಿ ದಾಟಿಸಿದರು.
ಇದನ್ನು ಓದಿ:ಸನ್ ರೈಸರ್ಸ್ Vs ಡೆಲ್ಲಿ: ವಾರ್ನರ್ಗೆ ಪಂತ್ ಸವಾಲ್... ಎರಡೂ ತಂಡಗಳ ಬಲಾಬಲ ಹೀಗಿದೆ